ಬೆಂಗಳೂರು: ಮಲ್ಲೇಶ್ವರದಲ್ಲಿರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯ ಮತ್ತು ಕಾಡು ಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಶ್ರೀ ಭ್ರಮರಾಂಭ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಭಕ್ತಿಭಾವದಿಂದ ನೆರವೇರಿತು.
ಉತ್ಸವದ ಅಂಗವಾಗಿ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕರ್ನಾಟಕದ ಖ್ಯಾತ 15 ಕಲಾತಂಡಗಳು ಹಾಗೂ ತಮಿಳುನಾಡಿನ ವಿಶೇಷ ತಮಟೆ-ವಾದ್ಯ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಗರದಲ್ಲಿ ಸಾಗಿತು. ಭಕ್ತರ ಘೋಷಣೆಗಳ ನಡುವೆ ದೇವರ ರಥೋತ್ಸವ ಕಂಗೊಳಿಸಿತು.
ಸಂಜೆ ಬ್ರಹ್ಮರಥೋತ್ಸವದಲ್ಲಿ ವಿಶೇಷ ಪಂಜಿನ ಮೆರವಣಿಗೆ ನಡೆಯಿತು. ಕಾಡು ಮಲ್ಲೇಶ್ವರ ಗೆಳಯರ ಬಳಗದ ಮಹಿಳಾ ಘಟಕದವರು ರಥಾರತಿ ಸಲ್ಲಿಸಿ ಭಕ್ತಿ ಭಾವ ವ್ಯಕ್ತಪಡಿಸಿದರು.
ಇಷ್ಟಾರ್ಥ ಸಿದ್ಧಿಯಾಗಲಿ, ಸಂಕಷ್ಟಗಳು ದೂರವಾಗಲಿ, ಸಂತಾನ ಭಾಗ್ಯ ಕರುಣಿಸಲಿ ಹಾಗೂ ಕುಟುಂಬದಲ್ಲಿ ನೆಮ್ಮದಿ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ ಲಕ್ಷಾಂತರ ಭಕ್ತರು ರಥದತ್ತ ಎಲಕ್ಕಿ, ಬಾಳೆಹಣ್ಣು ಮತ್ತು ಧವನ ಎಸೆದು ಭಕ್ತಿಭಾವ ವ್ಯಕ್ತಪಡಿಸಿದರು. ಈ ದೃಶ್ಯ ಉತ್ಸವದ ವಿಶೇಷ ಆಕರ್ಷಣೆಯಾಗಿತ್ತು.



























































