ರಾಯಚೂರು: ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರ ಪುತ್ರ ಸೇರಿ ಸಂತೋಷ್ ವಿರುದ್ಧ FIR ದಾಖಲಾಗಿದೆ.
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆದ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸಂತೋಷ್ ಹಾಗೂ ಇತರ ಏಳು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೇವದುರ್ಗ ಠಾಣೆಯ ಕಾನ್ಸ್ಟೆಬಲ್ ಹನುಮಂತರಾಯ ಅವರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ತಡೆದು ವಾಹನ ಮತ್ತು ಅದರ ಚಾಲಕನನ್ನು ತನಿಖೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭದಲ್ಲಿ ಶಾಸಕಿಯ ಕಡೆಯವರಿಂದ ಆಕ್ಷೇಪ ವ್ಯಕ್ತವಾಗಿದೆ. ಪೊಲೀಸ್ ಪೇದೆಯನ್ನು ಇನ್ಸ್ಪೆಕ್ಷನ್ ಬಂಗಲೆ ಸಮೀಪ ಕರೆಸಿಕೊಂಡ ಸಂತೋಷ್ ಬೆಂಬಲಿಗರು ಥಳಿಸಿದ್ದಾರೆ ಎಂಬುದು ಆರೋಪ.
ಕಾನ್ಸ್ಟೆಬಲ್ ನೀಡಿದ ದೂರಿನ ಆಧಾರದಲ್ಲಿ ಸಂತೋಷ್ ಮತ್ತು ಇತರ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




























































