ಬೆಂಗ್ಳೂರು ವ್ಯಕ್ತಿಯ ಕನಸಿನಲ್ಲಿ ದೇವಾಲಯ ಪತ್ತೆ.. ಕನಸಿಗೆ ಜೀವ ತುಂಬಿದ ಮುಸ್ಲಿಂ ಅಸ್ತಿಕ.. ‘ಸ್ವಪ್ನದ ಕಥೆ’ ಕೇಳಿ ಧಾವಿಸಿದ ಜ್ಯೋತಿಷಿಗಳು.. ಭೂಮಿ ಅಗೆದಾಗ ಸಿಕ್ತು ದೇವರ ವಿಗ್ರಹ..
ಮಂಗಳೂರು: ಸದಾ ಒಂದಿಲ್ಲೊಂದು ದೈವಪವಾಡಕ್ಕೆ ಸಾಕ್ಷಿಯಾಗುತ್ತಿರುವ ತುಳುನಾಡು ಇದೀಗ ಮತ್ತೊಂದು ಅಚ್ಚರಿಯ ಕೇಂದ್ರ ಬಿಂದುವಾಗಿದೆ. ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ‘ಕನಸಿನ ಕಥೆ’ಯಿಂದ ಬೆರಗಾಗಿ ಎಲ್ಲರ ಗಮನಸೆಳೆದಿದ್ದಾರೆ.
ಬೆಂಗಳೂರು ಮೂಲದ ಲಕ್ಷ್ಮಣ್ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ಜಮೀನು ಖರೀದಿಸಿದ್ದರು. ಇತ್ತೀಚಿಗೆ ಇವರಿಗೆ ರಾತ್ರಿ ಮಲಗಿದ್ದಾಗ ಕನಸು ಬಿದ್ದಿದ್ದು, ತಾನು ಖರೀದಿಸಿದ ಜಮೀನಿನ ಪಕ್ಕದಲ್ಲಿರುವ ಮುಸ್ಲಿಂ ವ್ಯಕ್ತಿ ಅಹಮದ್ ಬಾವ ಎಂಬವರ ಜಮೀನಿನಲ್ಲಿ ದೇವಾಲಯ ಇದೆ’ ಎಂಬ ಕನಸು ಅದಾಗಿತ್ತಂತೆ.
ತೆಕ್ಕಾರು ಗ್ರಾಮದ ಬಟ್ರಬೈಲಿನ ಮುಸ್ಲಿಂ ವ್ಯಕ್ತಿ ಅಹಮದ್ ಬಾವ ಎಂಬವರು ನೆರೆಮನೆಯವರ ಕನಸಿನ ಕತೆಗೆ ನೀರೆರೆದಿದ್ದಾರೆ. ಕನಸಿನಲ್ಲಿ ದೇವಾಲಯದ ಚಿತ್ರಣ ಸಿಕ್ಕಿದ ಬಗ್ಗೆ ಈ ಮುಸ್ಲಿಂ ವ್ಯಕ್ತಿ ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ಬಳಿಕ ಜ್ಯೋತಿಷಿಗಳ ಬಳಿ ತೆರಳಿದಾಗ ಅಲ್ಲೂ ಕನಸಿನಲ್ಲಿ ಕಂಡ ಕತೆಯೇ ಕಣ್ಣೆದು ನಿಂತಿತಂತೆ. ಜ್ಯೋತಿಷಿ ಹೇಳಿದ ವಿಚಾರವೂ ಈ ಕನಸಿನ ಕಥೆಗೆ ರೋಚಕತೆ ತುಂಬಿತು.
ಜ್ಯೋತಿಷಿಗಳ ಸಲಹೆಯಂತೆ ಮುಸ್ಲಿಂ ಕುಟುಂಬದ ಕೃಷಿ ಭೂಮಿಯನ್ನು ಜೆಸಿಬಿ ಮೂಲಕ ಅಗೆದಾಗ ನಿರ್ದಿಷ್ಟ ಸ್ಥಳದಲ್ಲಿ ದೇವರ ವಿಗ್ರಹ ಪತ್ತೆಯಾಗಿದೆ. ನೆಲದಡಿ ಭಗ್ನಗೊಂಡ ಗೋಪಾಲ ಕೃಷ್ಣ ದೇವರ ವಿಗ್ರಹ ಪತ್ತೆಯಾಗಿದ್ದು, ಈ ಬೆಳವಣಿಗೆ ಕರಾವಳಿಯಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ.
ಈ ಸ್ಥಳದಲ್ಲಿ ನೂರಾರು ವರ್ಷಗಳ ಹಿಂದಿನ ರೀತಿಯಲ್ಲಿರುವ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆಯಾಗಿದ್ದು ಇದರಿಂದ ಬೆರಗಾದ ಜಾಮೀನು ಮಾಲೀಕ ಇದೀಗ ಈ ಜಮೀನನ್ನು ದೇವಸ್ಥಾನ ನಿರ್ಮಿಸಲು ಬಿಟ್ಟುಕೊಡುವ ನಿರ್ಧಾರ ಕೈಗೊಂಡಿದ್ದಾರೆ. ಇದೀಗ ವಿಗ್ರಹ ಪತ್ತೆಯಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುವ ಮಹದಾಸೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.