ನಟ ಡಾಲಿ ಧನಂಜಯ್ ಅವರು ವೈದ್ಯೆಯನ್ನು ವಿವಾಹವಾಗಲಿದ್ದಾರೆ. ತಾವು ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಎಂಬವರೊಂದಿಗೆ ವಿವಾಹವಾಗುವ ಮಾಹಿತಿಯನ್ನು ಧನಂಜಯ್ ಹಂಚಿಕೊಂಡಿದ್ದಾರೆ.
ಪ್ರೀತಿಯ ಕರುನಾಡಿಗೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯ ಕೋರಿ ಪೋಸ್ಟ್ ಹಾಕಿರುವ ಧನಂಜಯ್, ‘ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ’ ಎಂದು ಕೋರಿದ್ದಾರೆ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗೋಕು ಎಂದೂ ಬರೆದುಕೊಂಡಿದ್ದಾರೆ.
ಸ್ತ್ರೀರೋಗ ತಜ್ಞೆಯಾಗಿರುವ ಧನ್ಯತಾ ಜೊತೆ ಡಾಲಿ ಧನಂಜಯ ಅವರು ಅನೇಕ ವರ್ಷಗಳ ಪರಿಚಯ ಹೊಂದಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ.
ಭಾವಿ ಪತ್ನಿ ಜೊತೆಗಿನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಧನಂಜಯ್, ಸುಂದರ ಸಾಲುಗಳನ್ನು ಕೂಡ ಬರೆದಿದ್ದಾರೆ. ಈ ವೀಡಿಯೋಗೆ ನೆಟ್ಟಿಗರಿಂದ ಸಕತ್ ಲೈಕ್ಸ್ ಸಿಕ್ಕಿದೆ.