ಬೆಂಗಳೂರು: ಹಾವೇರಿಯಲ್ಲಿ ರೈತ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಹಾವೇರಿಯ ರೈತನ ಆಸ್ತಿಯಲ್ಲಿ ವಕ್ಫ್ ಉಲ್ಲೇಖವಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಸದರು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ನಂತರ ಸರ್ಕಾರ ಸ್ಪಷ್ಟನೆ ನೀಡಿದ ನಂತರ ಅದನ್ನು ಡಿಲೀಟ್ ಮಾಡುತ್ತಾರೆ. ನಂತರ ಅವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಇದರಿಂದ ಸಮಾಜದಲ್ಲಿ ಘರ್ಷಣೆಗೆ ಪ್ರೇರಣೆಯಾಗಲಿದೆ ಎಂದು ದೂರು ನೀಡುತ್ತಾರೆ. ಈ ದೂರಿನನ್ವಯ ಪೊಲೀಸರು ತೇಜಸ್ವಿ ಸೂರ್ಯನ ಮೇಲೆ ಎಫ್ಐಆರ್ ದಾಖಲಿಸುತ್ತಾರೆ ಎಂದು ಪ್ರಕರಣದ ಹಿನ್ನೆಲೆಯನ್ನು ವಿವರಿಸಿದರು.
ಇದಕ್ಕೆ ಹೆದರಿಕೊಂಡ ಆ ಪುಟ್ಟ, ‘ಪ್ರಿಯಾಂಕ್ ಖರ್ಗೆಗೆ ಕೆಲಸ ಇಲ್ಲ, ಎಫ್ಐಆರ್ ಹಾಕಿಸುವುದೇ ಕೆಲಸ” ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾನೆ. ನಾನು ಇದುವರೆಗೂ ಅವರ ಮೇಲೆ, ಅವರ ಶಾಸಕರು, ಸಂಸದರು ಹಾಗೂ ಅವರ ಬಾಡಿಗೆ ಭಾಷಣಕಾರರ ಮೇಲೆ ಎಷ್ಟು ಎಫಐಆರ್ ಹಾಕಿಸಿದ್ದೇನೆ ಎಂದು ನೋಡಲಿ. ನನಗೆ ತಪ್ಪು ಮಾಹಿತಿ ಇತ್ತು, ಸುಳ್ಳು ಸುದ್ದಿಯಾದ ಕಾರಣ ಅದನ್ನು ಡಿಲೀಟ್ ಮಾಡಿದ್ದೇನೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಸುಳ್ಳು ಸುದ್ದಿ ಹಬ್ಬಿಸುತ್ತಿರುವ ನಿಮಗೆ ಮೆರವಣಿಗೆ ಮೂಲಕ ಸನ್ಮಾನ ಮಾಡಬೇಕಾ? ಸರ್ಕಾರದ ವತಿಯಿಂದ ಪ್ರಕರಣ ದಾಖಲಿಸುತ್ತೇವೆ. ಸುಳ್ಳು ಹೇಳಿದ ಮೇಲೆ ಅದಕ್ಕೆ ಪ್ರಾಯಶ್ಚಿತವಾಗಬೇಕಲ್ಲವೇ? ನಾನು ಅದನ್ನು ಡಿಲೀಟ್ ಮಾಡಿದ್ದೇನೆ ಎಂದು ಈಗ ಅಳುತ್ತಾ ಕೂತರೆ ಏನು ಪ್ರಯೋಜನ? ನೀವೊಬ್ಬ ಸಂಸದ. ಬೇರೆ ಸಮಯದಲ್ಲಿ ಹಿಂದೂಗಳ ಸಂರಕ್ಷ ಎಂದು ಹೇಳುವವರು ಈಗ ಯಾಕೆ ಅಳುತ್ತಿದ್ದೀರಿ? ಎಂದ ಖರ್ಗೆ ವ್ಯಂಗ್ಯವಾಡಿದರು.

ಇವರು ಹಾಗೂ ಇವರ ಬಾಡಿಗೆ ಭಾಷಣಕಾರರು ರಕ್ತಹೀರುವ ಕ್ರಿಮಿಗಳು ಎಂದು ತೇಜಸ್ವಿ ಸೂರ್ಯ ವಿರುದ್ಧ ವಾಕ್ಪ್ರಹಾರ ಮಾಡಿದ ಪ್ರಿಯಾಂಕ್ ಖರ್ಗೆ, ‘ಈ ಬಾರಿ ಎಮರ್ಜೆನ್ಸಿ ಎಕ್ಸಿಟ್ ಇಲ್ಲ. ಓಡಿ ಹೋಗಲು ಅವಕಾಶವಿಲ್ಲ. ಜನರಿಗೆ ನೀವು ಉತ್ತರಿಸಲೇಬೇಕು’ ಎಂದು ತರಾಟೆಗೆ ತೆಗೆದುಕೊಂಡರು. ಮಾತೆತ್ತಿದರೆ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವ ತೇಜಸ್ವಿ ಸೂರ್ಯ, ತಾವು ಯಾವ ಕುಟುಂಬದವರು ಎಂದು ಹೇಳುವುದಿಲ್ಲ. ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡರ ಬಗ್ಗೆ ಕುಟುಂಬ ರಾಜಕೀಯ ಎನ್ನುವ ಅವರಿಗೆ ವಿಜಯೇಂದ್ರ, ರಾಘವೇಂದ್ರ ಕಾಣುವುದಿಲ್ಲವೇ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ‘ನೀವು ಕುಟುಂಬ ರಾಜಕಾರಣ ಮಾಡುವ ಮುನ್ನ ನನಗೆ ಅವಕಾಶ ನೀಡಿ. ನಾನು ಬಿಜೆಪಿ ನಾಯಕರ ಡಿಎನ್ಎ ಪರೀಕ್ಷೆ ಮಾಡಿಸಿಕೊಡುತ್ತೇನೆ. ನಿಮ್ಮ ತಂದೆ, ತಾಯಿ, ಸಂಬಂಧಿಕರ ಬಗ್ಗೆ ಹೇಳಿಕೊಳ್ಳಲು ಅಷ್ಟೋಂದು ಅಸಹ್ಯವೇ? ನಿಮ್ಮಲ್ಲಿರುವ ಕುಟುಂಬ ರಾಜಕೀಯ ನೋಡಿಕೊಳ್ಳಿ’ ಎಂದು ಎದಿರೇಟು ನೀಡಿದರು. .
ಟ್ವೀಟ್ ಮಾಡುವುದು, ನಂತರ ಡಿಲೀಟ್ ಮಾಡುವುದು ಸಂಸದ ಸೂರ್ಯ ಅವರಿಗೆ ಹವ್ಯಾಸವಾಗಿಬಿಟ್ಟಿದೆ. ಸೂರ್ಯ ಅವರು ಮಹಿಳಾ ಪೀಡಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬಳು ಆರೋಪ ಮಾಡುತ್ತಾರೆ. ಇದರ ಬಗ್ಗೆ ಸುದ್ದಿಯಾಗದಂತೆ 49 ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ನಿರ್ಬಂಧ ಆದೇಶ ತಂದಿದ್ದಾರೆ. ಮೀಟೂ ಸೂರ್ಯ ಅವರು ಈ ಕಾರಣಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ಕಾಟು ಟೀಕೆ ಮಾಡಿದ ಪ್ರಿಯಾಂಕ್ ಖರ್ಗೆ, ಸನಾತನ ಧರ್ಮ ಕುರಿತು ನೀಡಿದ್ದ ಹೇಳಿಕೆಯನ್ನು ಸೂರ್ಯ ಅವರು ಈ ಹಿಂದೆ ಹಿಂಪಡೆದಿದ್ದರು. ವಿಮಾನ ಹಾರಾಟದಲ್ಲಿರುವಾಗ ತುರ್ತು ನಿರ್ಗಮನ ಬಾಗಿಲು ತೆರೆಯಲು ಮುಂದಾಗಿದ್ದ ಸೂರ್ಯ ಅವರು ನಂತರ ಕ್ಷಮೆ ಕೇಳಿದ್ದರು. ಅರಬ್ ಮಹಿಳೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಅರಬ್ ಸರ್ಕಾರ ಕೂಡ ಎಚ್ಚರಿಕೆ ನೀಡಿತ್ತು. ಇವರು ರಾಷ್ಟ್ರಕ್ಕೆ ಅಪಮಾನ ಮಾಡಿದ ವ್ಯಕ್ತಿ. ಕೋವಿಡ್ ಸಮಯದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದು ಹಿರೋ ಆಗಲು ಹೋಗಿ ಬಿಜೆಪಿ ನಾಯಕರನ್ನೇ ಸಿಲುಕಿಸಿದ್ದು ತೇಜಸ್ವಿ ಸೂರ್ಯ ಎಂದು ಕಾಟು ಟೀಕೆ ಮಾಡಿದರು.
ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರ ರಕ್ಷಣೆ ಮಾಡುತ್ತೇವೆ ಎಂದವರು 2 ಬಾರಿ ಸಂಸದರಾದರೂ ಸಿಬಿಐಗೆ ಪ್ರಕರಣ ಕೊಟ್ಟರೂ ಅದು ಎಲ್ಲಿವರೆಗೆ ಬಂದಿದೆ? ಎಲ್ಲಾ ವಿಚಾರದಲ್ಲೂ ಸಿಬಿಐ ತನಿಖೆ ಆಗ್ರಹಿಸುವ ಸೂರ್ಯ ಅವರು ಕೊಟ್ಟಿರುವ ಪ್ರಕರಣಗಳ ಬಗ್ಗೆ ತನಿಖೆ ಏನಾಗಿದೆ? ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇಶದ್ರೋಹಿ ಎಂದಿದ್ದು ನೆನಪಿದೆಯಾ? ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಸುಳ್ಳು ಮಾಹಿತಿಯೇ ಅವರ ಬಂಡವಾಳ. ಈತನೊಬ್ಬ ಡಿಲೀಟ್ ರಾಜ. ಈತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಾನೆ. ಯಾರಾದರೂ ಅದನ್ನು ಗುರುತಿಸಿ ಟೀಕೆ ಮಾಡಿದರೆ ಡಿಲೀಟ್ ಮಾಡುತ್ತಾರೆ ಎಂದು ಕಿಡಿಕಾರಿದರು.
ಶೋಭಾ ಕರಂದ್ಲಾಜೆ ಅವರದೂ ಇದೇ ಕತೆ. ಸಧ್ಯ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ಎಂದು ಬೊಬ್ಬೆ ಹೊಡೆಯುತ್ತಿರುವ ಇವರ ಹೊಣೆಗಾರಿಕೆ ನಾವು ಅರಿಯಬೇಕು. 2017ರಲ್ಲಿ 19 ವಯಸ್ಸಿನ ಶಿವಕುಮಾರ್ ಉಪ್ಪಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಗೋರಕ್ಷನಾಗಿದ್ದು ಹಾಡಹಗಲೇ ಹತ್ಯೆ ಮಾಡಲಾಗಿದೆ ಎಂದು ಶೋಭಾ ಅವರು ಟ್ವೀಟ್ ಮಾಡುತ್ತಾರೆ. ಇದು ಆತ್ಮಹತ್ಯೆ ಎಂದು ಗೊತ್ತಾದ ನಂತರ ಇದನ್ನು ಡಿಲೀಟ್ ಮಾಡುತ್ತದೆ. ರುದ್ರೇಶ್ ಸಾವಿನ ಪ್ರಕರಣದಲ್ಲಿ ಆಗಿನ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ವಿರುದ್ಧ ಟ್ವೀಟ್ ಮಾಡುತ್ತಾರೆ. ಕಾಂಗ್ರೆಸ್ ಮಾತ್ರವಲ್ಲ ಆರ್ ಎಸ್ಎಸ್ ಕೂಡ ಶೋಭಾ ಅವರ ಹೇಳಿಕೆ ನಿರಾಕರಿಸಿತ್ತು. ಈವರೆಗೂ ಅದರ ಬಗ್ಗೆ ಸಾಕ್ಷ್ಯಗಳಿಲ್ಲ. ಜುಲೈ 8, 2017ರಂದು ಆಗಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಜಿಹಾದಿಗಳಿಂದ 23 ಹಿಂದೂಗಳ ಹತ್ಯೆಯಾಗಿದೆ ಎಂದು ಒಂದು ಪಟ್ಟಿ ನೀಡುತ್ತಾರೆ. ಅದರಲ್ಲಿ ಮೂಡಿಬಿದರೆ ಅಶೋಕ್ ಪೂಜಾರಿ ಹತ್ಯೆಯಾಗಿದ್ದಾನೆ ಎಂದು ಹೇಳಲಾಗಿರುತ್ತದೆ. ಇದರ ತನಿಖೆ ಮಾಡಿದಾಗ ಆತ ಇನ್ನು ಬದುಕಿರುತ್ತಾನೆ. ರಾಜೂ ಮಡಿಕೇರಿ ಟಿಪ್ಪು ಜಯಂತಿ ಆಚರಣೆ ವೇಳೆ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಾರೆ, ಆದರೆ ಆಸ್ಪತ್ರೆಯಲ್ಲಿ ಆತ್ಮಹತ್ಯೆ ವರದಿ ಬರುತ್ತದೆ. 2017-18ರಲ್ಲಿ ಪರೇಶ್ ಮೇಸ್ತಾ ಸಾವಿನ ಮೇಲೆ ಕರಾವಳಿ ಭಾಗದಲ್ಲಿ ಚುನಾವಣೆಯನ್ನೇ ಮಾಡುತ್ತಾರೆ. ನಂತರ ಸಿಬಿಐ ಈ ಪ್ರಕರಣ ತನಿಖೆ ನಡೆಸಿ ಇದು ಹತ್ಯೆಯಲ್ಲ, ನೀರಿಗೆ ಬಿದ್ದು ಆಗಿರುವ ಸಾವು ಎಂದು ಹೇಳಿತು ಎಂದು ಪ್ರಿಯಾಂಕ್ ಖರ್ಗೆಟೀಕಿಸಿದರು.






































































