ಮೈಸೂರು: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಸುಸಜ್ಜಿತ KSRTC ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಯು ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಮೈಸೂರು ನಗರದಲ್ಲಿ ಸುಮಾರು 14 ಎಕರೆ ಜಾಗದಲ್ಲಿ ಅಂದಾಜು 120 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಸಾರಿಗೆ ಸೌಲಭ್ಯ ಕಲ್ಪಿಸಲು ಪಾರಂಪರಿಕ ಹಾಗೂ ಆಧುನಿಕ ವಿನ್ಯಾಸ ಒಳಗೊಂಡಂತೆ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಮೈಸೂರು ನಗರದ ಹೃದಯ ಭಾಗದ ಇಕ್ಕಟ್ಟಾದ ಜಾಗದಲ್ಲಿರುವ ಕೇಂದ್ರೀಯ ಬಸ್ ನಿಲ್ದಾಣ (ಸಬ್ ಅರ್ಬನ್)ದ ಮೇಲಿನ ಒತ್ತಡ ತಗ್ಗಿಸಿ, ಪ್ರಯಾಣಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬನ್ನಿಮಂಟಪದಲ್ಲಿರುವ ಡಿಪೋ ಪಕ್ಕದ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹೊರತುಪಡಿಸಿದರೆ ಅತೀ ಹೆಚ್ಚಾಗಿ ಜನಸಂದಣಿ ಕಾಣಸಿಗುವ ಬಸ್ ನಿಲ್ದಾಣ ಮೈಸೂರು ಬಸ್ ನಿಲ್ದಾಣ. ಅದರಲ್ಲೂ ವಿಶೇಷವಾಗಿ ವಿಶ್ಚವಿಖ್ಯಾತ ದಸರಾ ಸಮಯದಲ್ಲಿ ಉಂಟಾಗುವ ಜನಸಂದಣಿಗೆ ಅನುಗುಣವಾಗಿ ಬಸ್ಸುಗಳ ಕಾರ್ಯಾಚರಣೆ ನಡೆಸಿ, ಸಾರ್ವಜನಿಕರಿಗೆ ವ್ಯವಸ್ಥಿತ ಸಾರಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ಉದ್ದೇಶಿತ ಹೊಸ ಬಸ್ ನಿಲ್ದಾಣದಿಂದ ಈಡೇರಲಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಪ್ರಸ್ತುತ ಸರಾಸರಿ 2100 ಟ್ರಿಪ್ ಗಳನ್ನು ಈ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನು 10 ವರ್ಷಗಳ ಅಂತರದಲ್ಲಿ 2500 ರಿಂದ 3000 ಟ್ರಿಪ್ ಗಳಿಗೆ ಏರಿಕೆಯಾಗುವುದೆಂದು ಅಂದಾಜಿಸಲಾಗಿದೆ.ಹಾಲಿಯಿರುವ 30 ಬಸ್ ಬೇಗಳು ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ಇದು ಸಾಲದಾಗಿದೆ ,ಹೊಸ ಯೋಜಿತ ಬಸ್ ನಿಲ್ದಾಣದಲ್ಲಿ 75 ಬಸ್ ಬೇ ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳು, ಬೇಬಿ ಕೇರ್ ಸೆಂಟರ್, ಚಾಲನಾ ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹಗಳ ವ್ಯವಸ್ಥೆ ಇರಲಿದೆ ಎಂದವರು ವಿವರಿಸಿದ್ದಾರೆ.
ಹೀಗಿರಲಿದೆ ಮೈಸೂರು ಬಸ್ ನಿಲ್ದಾಣ:
ತಳಮಹಡಿಯಲ್ಲಿದ್ವಿಚಕ್ರವಾಹನ ಹಾಗೂ ಕಾರುಗಳ ನಿಲುಗಡೆಗೆ ಅವಕಾಶ ಮಾಡಲಾಗುತ್ತದೆ.
ನೆಲ ಮಹಡಿಯಲ್ಲಿ ಬಸ್ ನಿಲ್ದಾಣ, ಕಚೇರಿ ಕೊಠಡಿಗಳು ವಿದ್ಯುತ್ ಚಾಲಿತ ಬಸ್‌ಗಳ ರೀಚಾರ್ಜ್ ಪಾಯಿಂಟ್‌ಗಳು ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳು, ಶೌಚಾಲಯ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಮೊದಲ ಅಂತಸ್ತಿನಲ್ಲಿ ವಿಭಾಗೀಯ ಕಚೇರಿಗಳು, ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ವಾಣಿಜ್ಯ ವಿಸ್ತೀರ್ಣವನ್ನು ಯೋಜಿಸಲಾಗಿದೆ .
ಎರಡನೇ ಅಂತಸ್ತಿನಲ್ಲಿ ಮಲ್ಟಿ ಪ್ಲೆಕ್ಸ್ ಚಿತ್ರ ಮಂದಿರಗಳು ಹಾಗೂ ಫುಡ್ ಕೋರ್ಟ್ ಮತ್ತು ವಾಣಿಜ್ಯ ವಿಸ್ತೀರ್ಣವನ್ನು ಯೋಜಿಸಲಾಗಿದೆ.
ಮೈಸೂರು ಬನ್ನಿಮಂಟಪದಲ್ಲಿರುವ KSRTC ಡಿಪೋಗೆ ಸೇರಿದ 61 ಎಕರೆ ಜಾಗದ ಪೈಕಿ 14 ಎಕರೆ ವಿಸ್ತೀರ್ಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಿ ಸಮಗ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿ, ಬನ್ನಿಮಂಟಪದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಡನೆ ಚರ್ಚೆ ನಡೆಸಿದ್ದು, ಯೋಜನಾ ನಕ್ಷೆ, ಕಾಮಾಗಾರಿ ವಿವರಗಳನ್ನು ಪರಾಮರ್ಶಿಸಿರುವ ಮುಖ್ಯಮಂತ್ರಿಗಳು ಸಾರ್ವಜನಿಕ ಪ್ರಯಾಣಿಕರಿಗೆ ಸುವ್ಯವಸ್ಥಿತ ಸಾರಿಗೆ ಸೌಲಭ್ಯ ನೀಡಲು ಈ ಉದ್ದೇಶಿತ ಬಸ್ ನಿಲ್ದಾಣದ ಅಗತ್ಯವಿರುವುದಾಗಿ DULT ಸಂಸ್ಥೆಯವರ ಹಣಕಾಸು ನೆರವಿನಿಂದ ಅನುದಾನ ನೀಡಲು ಸೂಚಿಸಿದ್ದಾರೆ. 2025ರಲ್ಲಿ ನೂತನ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವರು ವಿವರಿಸಿದರು.
ಬನ್ನಿಮಂಟಪದ ಉದ್ದೇಶಿತ ನೂತನ ಬಸ್ ನಿಲ್ದಾಣದಲ್ಲಿ ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ದೂರದ ನಗರಗಳು ಹಾಗೂ ಅಂತಾರಾಜ್ಯ ಸಾರಿಗೆ ಬಸ್‌ಗಳು ಬಂದು ಹೋಗಲು ವ್ಯವಸ್ಥೆ ಕಲ್ಪಿಸುವುದು. ಸದ್ಯ ಕಾರ್ಯಾಚರಣೆಯಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣವನ್ನು ಸಂಪೂರ್ಣ ಸ್ಥಳಾಂತರ ಮಾಡದೆ ಹಾಗೆಯೇ ಉಳಿಸಿಕೊಂಡು, 2024ರ ಜನವರಿ 1ರಂದು ಮೈಸೂರು ವಿಭಾಗದಿಂದ ಪ್ರತ್ಯೇಕವಾಗಿ ರಚಿಸಿರುವ ಮೈಸೂರು ಗ್ರಾಮಾಂತರ ವಿಭಾಗಕ್ಕೆ ಬಳಸಿಕೊಳ್ಳುವ ಮೂಲಕ ಮಂಡ್ಯ, ಚಾಮರಾಜ ನಗರ, ಕೊಡಗು, ಹಾಸನ ಜಿಲ್ಲೆಗಳಿಗೆ ಸಾರಿಗೆ ಬಸ್‌ಗಳ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ನೂತನ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್ ನಿಲ್ದಾಣದ ನಡುವೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಸ್ತುತ ಇರುವ ಗ್ರಾಮಾಂತರ ಬಸ್ ನಿಲ್ದಾಣದ ಮೇಲೆ ಹೆಚ್ಚಿನ ಸಂಚಾರ ಒತ್ತಡ:
ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗವು 6 ಬಸ್ ಡಿಪೋ, ಮೈಸೂರು ನಗರ ವಿಭಾಗವು 4 ಡಿಪೋ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 10 ಬಸ್ ಡಿಪೋಗಳು ಹಾಗೂ ಎರಡೂ ವಿಭಾಗಗಳ ವ್ಯಾಪ್ತಿಯಲ್ಲಿ 31 ಬಸ್ ನಿಲ್ದಾಣಗಳನ್ನು ಹೊಂದಿದ್ದು, 1,400 ಬಸ್‌ಗಳು ಇಲ್ಲಿಂದ 1,213 ಅನುಸೂಚಿಗಳಲ್ಲಿ ಕಾರ್ಯಾಚರಣೆ ಮಾಡಿಸಲಾಗುತ್ತದೆ.
ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ
ಗ್ರಾಮಾಂತರ ಬಸ್ ನಿಲ್ದಾಣವು ಚಿಕ್ಕದಾಗಿರುವುದರಿಂದ ಬನ್ನಿಮಂಟಪದ ಕೆಎಸ್‌ಆರ್‌ಟಿಸಿ ಡಿಪೋದ 14 ಎಕರೆ ಜಾಗದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಪರಿಕಲ್ಪಿತ ನಕ್ಷೆಗೆ ಅನುಮೋದನೆ ಪಡೆದಿದ್ದು ವಿವರವಾದ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಉದ್ದೇಶಿತ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿದೆ.