ಬೆಂಗಳೂರು: ಕೆಎಂಎಫ್ ಮತ್ತು ಗುಜರಾತ್ನ ಅಮೂಲ್ ವಿಲೀನದ ಪ್ರಶ್ನೆ ಇಲ್ಲ. ಕೆಎಂಎಫ್ ವಿಲೀನದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾತನಾಡಿಲ್ಲ ಎಂದು ರಾಜ್ಯದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆಎಂಎಫ್ ಬಲಿಷ್ಠ ಸಂಸ್ಥೆ. 15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಇದರಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ವಿವರಿಸಿದರು. ಇಲ್ಲಿನ ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್ನಷ್ಟೇ ಪ್ರಬಲವಾಗಿ ಬೆಳೆದಿದೆ. ವಿಲೀನ ಪ್ರಸ್ತಾಪ ಇಲ್ಲವೆಂದು ಮುಖ್ಯಮಂತ್ರಿಗಳೂ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.
ಗೆಜ್ಜಲಗೆರೆಯಲ್ಲಿ ಮಾತನಾಡುವಾಗ ಗುಜರಾತ್ನಷ್ಟೇ ಪ್ರಬಲವಾಗಿ ಕೆಎಂಎಫ್ ಬೆಳೆಯುತ್ತಿದೆ; ಎರಡೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದು ಅಮಿತ್ ಶಾ ಅವರು ಹೇಳಿದ್ದರು. ವಿಲೀನದ ಚರ್ಚೆಯೂ ಆಗಿಲ್ಲ; ಅಂಥ ಮಾತನ್ನೂ ಅವರು ಆಡಿಲ್ಲ ಎಂದು ಸಚಿವ ಸೋಮಶೇಖರ್ ಸ್ಪಷ್ಟಪಡಿಸಿದರು.
2 ದಿನವೂ ಅವರ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಂಥ ಪ್ರಸ್ತಾಪವೇ ಇಲ್ಲ. ಕಾಂಗ್ರೆಸ್- ಜೆಡಿಎಸ್ನವರು ಚುನಾವಣೆ ಹತ್ತಿರ ಬರುವ ಕಾರಣ ಗಿಮಿಕ್ ಮಾಡಿ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.