ಬೆಂಗಳೂರು: ಬೆಂಗಳೂರಿನಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ರೋಚಕ ಘಟ್ಟಕ್ಕೆ ತಲುಪಿದೆ. ಇಂದು ಹೋರಾಟ ನಿರತ ರೈತರನ್ನು ಪೊಲೀಸರು ಬಂಧಿಸುವ ಮೂಲಕ ಪ್ರೀಡಂ ಪಾರ್ಕ್ ಕೋಲಾಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಕಳೆದ ಹನ್ನೊಂದು ದಿನಗಳಿಂದ ಕಬ್ಬು ಬೆಳೆಗಾರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ವರೆಗೂ ವಿವಿಧ ಹಂತಗಳಲ್ಲಿ ಹೋರಾಟ ನಡಸಿದ್ದ ರೈತರು ಇಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ‘ಸರ್ಕಾರಕ್ಕೆ ಸವಾಲ್ ‘ಎಂಬ ಹೋರಾಟ ಆರಂಭಿಸಿದರು. ಕಳೆದ 12 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಅನುಕಂಪ ತೋರದಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಇಂದು ತಮ್ಮ ಹೋರಾಟಕ್ಕೆ ರೋಚಕ ತಿರುವು ನೀಡಿದರು. ಆದರೆ ಪೊಲೀಸರು ನೂರಾರು ರೈತರನ್ನು ಬಂಧಿಸಿದರು. ಪೊಲೀಸರ ಈ ನಡೆ ರೈತ ಸಮುದಾಯವನ್ನು ಕೆರಳುವಂತೆ ಮಾಡಿದೆ.
ಹನ್ನೊಂದನೇ ದಿನದ ಹೋರಾಟದ ನಡುವೆ ಇಂದು ಕೆಲವು ರೈತ ಮುಖಂಡರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಭೇಟಿಗಾಗಿ ತೆರಳಿತ್ತು. ಆದರೆ ರೈತರ ಭೇಟಿಗೆ ಸಿಎಂ ತಯಾರಿರಲಿಲ್ಲ. ಮುಖ್ಯಮಂತ್ರಿ ಭೇಟಿಯಾಗಲೇಬೇಕು ಎಂದು ಪಟ್ಟು ಹಿಡಿದ ರೈತರನ್ನು ಪೊಲೀಸರು ಬಂಧಿಸಿದರು.
ಈ ವಿಷಯ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ನಡೆಸುತ್ತಿದ್ದ ರೈತರಿಗೆ ತಿಳಿದಿದ್ದೇ ತಡ, ಈ ರೈತರೂ ಸರ್ಕಾರದ ವಿರುದ್ದ ತಿರುಗಿಬಿದ್ದರು. ರೈತ ವಿರೋಧಿ ಸರ್ಕಾರ ತಮ್ಮನ್ನೂ ಬಂಧಿಸಿಲಿ ಎಂದು ಆಕ್ರೋಶ ಹೊರಹಾಕಿದರು. ಗೊಂದಲದ ಪರಿಸ್ಥಿತಿಗೆ ತಿರುಗುವ ಮುನ್ನ ಎಚ್ಚೆತ್ತ ಪೊಲೀಸರು ಈ ರೈತರನ್ನು ಸಮಾಧಾನಪಡಿಸಲು ಆದ್ಯತೆ ನೀಡುವ ಬದಲು ರೈತ ನಾಯಕ ಕುರುಬೂರು ಶಾಂತಕುಮಾರ್ ಸೇರಿದಂತೆ ಬಂಧಿಸಿ ಬೇರೆಡೆಗೆ ಕರೆದೊಯ್ದರು. ಇದರಿಂದ ಮತ್ತಷ್ಟು ಕುಪಿತರಾದ ರೈತರು, ರಾಜ್ಯ ಸರ್ಕಾರ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಘೋಷಣೆ ಕೋಗಿದರು. ಈ ಸನ್ನಿವೇಶ ಮತ್ತಷ್ಟು ಕೋಲಾಹಲಕ್ಕೆ ಕಾರಣವಾಯಿತು.
ಇದು ಖಾಕಿಗಳ ಮೂಲಕ ಸರ್ಕಾರದ ದೌರ್ಜನ್ಯ ಎಂದ ಕುರುಬೂರು:
ಪ್ರತಿಭಟನಾ ನಿರತ ರೈತರನ್ನು ಬಂಧಿಸಿದ ಪೊಲೀಸರು ಗುಂಪು-ಗುಂಪಾಗಿ ಬೇರೆ ಬೇರೆ ಕಡೆ ಕರೆದೊಯ್ದೊದ್ದಾರೆ. ತಮ್ಮ ಹೋರಾಟವನ್ನು ವಿಫಲಗೊಳಿಸಲು ಸರ್ಕಾರ ಈ ರೀತಿ ದೌರ್ಜನ್ಯ ಎಸಗುತ್ತಿದೆ ಎಂದು ಬಂಧನಕ್ಕೊಳಗಾಗಿರುವ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಚ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರಹಾಕಿದರು.
ತಮ್ಮ ಜೊತೆಗಿರುವ ನೂರಾರು ರೈತರನ್ನು ಚಾಮರಾಜಪೇಟೆಗೆ ಕರೆತಂದಿದ್ದಾರೆ. ಇನ್ನೂ ಕೆಲವರನ್ಬು ರೈಲು ನಿಲ್ದಾಣ ಬಳಿ ಕೂಡಿಟ್ಟಿದ್ದಾರೆ ಎಂದು ಸಿಟ್ಟು ವ್ಯಕ್ತಪಡಿಸಿದ ಕುರುಬೂರು ಶಾಂತಕುಮಾರ್ ಅವರು, ತಮ್ಮ ಮೇಲೆ ಯಾವುದೇ ದೌರ್ಜನ್ಯ ನಡೆದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಬಂಧಿತರಿಂದ ಊಟ ತಿಂಡಿ ಬಹಿಷ್ಕಾರ..!
ಹೋರಾಟನಿರತ ರೈತರು ಮಧ್ಯಾಹ್ನದ ಊಟವನ್ನೂ ನಿರಾಕರಿಸಿದ್ದಾರೆ. ತಮ್ಮನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿ ಅಥವಾ ಮುಖ್ಯಮಂತ್ರಿ ಜೊತೆ ಮಾತುಕತೆಗೆ ಅವಕಾಶ ಮಾಡಿಕೊಡಲಿ ಎಂದು ಸವಾಲು ಹಾಕಿದ್ದಾರೆ. ಕಾನೂನು ಪ್ರಕಾರವೇ ಬಂಧಿಸಿದ್ದಲ್ಲಿ ಕೋರ್ಟ್‌ಗೆ ಹಾಜರುಪಡಿಸಲಿ ಎಂದಿರುವ ಈ ರೈತರು, ನ್ಯಾಯ ಸಿಗುವವರೆಗೆ ನಮಗೆ ಊಟ ತಿಂಡಿ ಬೇಡ ಎಂದು ಹಠಕ್ಕೆ ಬಿದ್ದಿದ್ದಾರೆ.
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗಾಗಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಇದೀಗ ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.





















































