ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 10 ಲಕ್ಷ ಸಿಬ್ಬಂದಿ ನೇಮಕಾತಿ ಅಭಿಯಾನಕ್ಕೆ ರೋಜ್‍ಗಾರ್ ಮೇಳಕ್ಕೆ ಚಾಲನೆ ನೀಡಿದ್ದು, ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ಹೊಸದಾಗಿ ಸೇರ್ಪಡೆಗೊಂಡ 75,000 ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದೊಂದು ಮಹತ್ವದ ಉಪಕ್ರಮವಾಗಿದೆ. ಈ ಮೂಲಕ ನಿರುದ್ಯೋಗ ನಿವಾರಣೆಯ ಕನಸು ನನಸಾಗಲಿದೆ. ಇದಕ್ಕಾಗಿ ಅವರಿಗೆ ರಾಜ್ಯ ಬಿಜೆಪಿ ವತಿಯಿಂದ ಪ್ರಧಾನಿಯವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿಯವರು ಈ ಕಾರ್ಯಕ್ರಮ ಕೈಗೊಂಡಿದ್ದು, 75 ಸಾವಿರ ಯುವಕರಿಗೆ ಉದ್ಯೋಗ ಲಭಿಸಿದೆ. ಬಿಜೆಪಿ ಆಡಳಿತವುಳ್ಳ ವಿವಿಧ ರಾಜ್ಯಗಳಲ್ಲೂ ಇಂಥ ಉದ್ಯೋಗ ಮೇಳ ನಡೆಯಲಿದೆ. ಇದರಿಂದ ಯುವ ಸಮೂಹದ ಉದ್ಯೋಗದ ಆಶಯ ಈಡೇರಲಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವಾಗಿ ಮಾಡುವ ಕನಸು ಇದರಿಂದ ನನಸಾಗಲಿದೆ. ಉದ್ಯಮಿಗಳು, ಕೈಗಾರಿಕೆದಾರರು ಸೇರಿ ಎಲ್ಲರೂ ಈ ಕಾರ್ಯದಲ್ಲಿ ತಮ್ಮ ಸಹಾಯಹಸ್ತ ಚಾಚಲಿದ್ದಾರೆ. ಇದು ದೇಶದ ‘ಅಮೃತ ಕಾಲ’. ಎಲ್ಲರ ಪ್ರಯತ್ನದಿಂದ (ಸಬ್‍ಕಾ ಪ್ರಯಾಸ್) ಇದು ಈಡೇರುವ ಆಶಯ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕಳೆದ 8 ವರ್ಷಗಳ ಮೋದಿಜಿ ಅವರ ನೇತೃತ್ವದ ಆಡಳಿತದಲ್ಲಿ ಭಾರತವು 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಮುನ್ನಡೆ ಸಾಧಿಸಿದೆ. ಸ್ಕಿಲ್ ಇಂಡಿಯಾ ಅಭಿಯಾನದಡಿ ಕೌಶಲ್ಯ ವೃದ್ಧಿಗೆ ಮಹತ್ವ ಕೊಟ್ಟಿದ್ದು, 1.25 ಕೋಟಿ ಯುವಕರು ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಮುದ್ರಾ ಯೋಜನೆಯಡಿ 20 ಲಕ್ಷ ಕೋಟಿ ಹಣವನ್ನು ಸಾಲವಾಗಿ ಉದ್ಯೋಗಾಕಾಂಕ್ಷಿಗಳಿಗೆ ಕೊಡಲಾಗಿದೆ. ಉತ್ಪಾದನಾ ಕ್ಷೇತ್ರ ಮತ್ತು ಪ್ರವಾಸೋದ್ಯಮಗಳಿಗೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ. ಈ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿಯ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ವಿವರಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಭವಿಷ್ಯ ನಿಧಿಯಡಿ ನೋಂದಾಯಿಸಿಕೊಂಡ ಉದ್ಯೋಗಿಗಳ ಸಂಖ್ಯೆ 17 ಲಕ್ಷ. ಇದು ಉದ್ಯೋಗ ಸೃಷ್ಟಿಯಲ್ಲಿನ ಹೆಚ್ಚಳಕ್ಕೆ ಸ್ಪಷ್ಟ ಉದಾಹರಣೆ. ಈ ಪೈಕಿ 18ರಿಂದ 25 ವರ್ಷದೊಳಗಿನವರು 7 ಲಕ್ಷ ಎಂಬುದು ಗಮನಾರ್ಹ. ಪಿಎಂ ಆವಾಸ್ ಯೋಜನೆಯಡಿ 3 ಕೋಟಿಗೂ ಹೆಚ್ಚು ಮನೆ ನಿರ್ಮಾಣ, ಸಾವಿರಾರು ಕಿಮೀ ಹೆದ್ದಾರಿಗಳ ನಿರ್ಮಾಣ, ರೈಲ್ವೆ ಹಳಿ ಗೇಜ್ ಬದಲಾವಣೆ- ಡಬ್ಲಿಂಗ್ ಕಾರ್ಯವೂ ಭರದಿಂದ ಸಾಗಿದೆ. ಮೂಲಸೌಕರ್ಯ ವೃದ್ಧಿಗೆ 100 ಲಕ್ಷ ಕೋಟಿಯನ್ನು ವಿನಿಯೋಗಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದು ಸರ್ವತೋಮುಖ ಅಭಿವೃದ್ಧಿಗೆ ಪೂರಕ ಎಂದು ತಿಳಿಸಿದ್ದಾರೆ.







































































