ಬೆಂಗಳೂರು: ಗ್ರಾಮೀಣ ಹಾಗೂ ದೇಸೀ ಕ್ರೀಡೆಗಳನ್ನು ಉತ್ತೇಜಿಸಲು ಪ್ರಮುಖವಾಗಿ ಕಬ್ಬಡ್ಡಿ, ಖೊ- ಖೋ , ಕುಸ್ತಿ, ಎತ್ತಿನಗಾಡಿ ಸ್ಪರ್ಧೆಗಳು ಸೇರಿದಂತೆ ಒಟ್ಟು ಹತ್ತು ಗ್ರಾಮೀಣ ಕ್ರೀಡೆಗಳನ್ನು ಗುರುತಿಸಿ 2-3 ತಿಂಗಳ ಕಾಲ ಖಾಸಗಿ ಪ್ರಾಯೋಜಕತ್ವದಲ್ಲಿ ಆಯೋಜಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾತ್ರೆಯ ಮಾದರಿಯಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲು ಸೂಚಿಸಿದರು.
ಸ್ವಂತ ಕಟ್ಟಡಗಳಿಲ್ಲದ 1000 ಅಂಗನವಾಡಿಗಳಿಗೆ ನರೇಗಾ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡಗಳನ್ನು ಇಲಾಖೆಗಳ ಸಮನ್ವಯದೊಂದಿಗೆ ಗುರುತಿಸಿ ಕ್ಷಿಪ್ರಗತಿಯಲ್ಲಿ ಕೈಗೊಳ್ಳಲು ಸೂಚಿಸಿದರು. ಆರ್.ಡಿ.ಪಿ.ಆರ್ ವತಿಯಿಂದ ಪ್ರತಿ ಘಟಕಕ್ಕೆ ಒದಗಿಸುವ 5 ಲಕ್ಷ ರೂ.ಗಳ ಮೊತ್ತವನ್ನು ಕ್ರಿಯಾ ಯೋಜನೆಗಳಲ್ಲಿ ಕಡ್ಡಾಯವಾಗಿ ನಮೂದಿಸುವುದು. ಈ ಬಗ್ಗೆ ಪಿ.ಡಿ.ಒ ಗಳಿಗೆ ನಿರ್ದಿಷ್ಟ ಸೂಚನೆಗಳನ್ನು ಕಳುಹಿಸಲು ಸೂಚಿಸಿದರು. ಅಭಿವೃದ್ಧಿ
ಆಕಾಂಕ್ಷಿ ತಾಲ್ಲೂಕುಗಳಿಗೆ ಆದ್ಯತೆ ನೀಡುವಂತೆಯೂ ಅವರು ತಿಳಿಸಿದರು.
ನರೇಗಾ ಯೋಜನೆಯಡಿ ರೈತರ ಹೊಲಗಳಿಗೆ ಹೋಗುವ ರಸ್ತೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು. ರಸ್ತೆಗಳ ನಿರ್ಮಾಣಕ್ಕೆ ನಿಯಮಗಳನ್ನು ರೂಪಿಸಿ ಪ್ರತಿ ತಾಲ್ಲೂಕಿಗೆ ಹಾಗೂ ಗರಿಷ್ಠ 2 ಕಿಮೀ ಗಳಂತೆ ಕಿ.ಮೀ ಹಾಗೂ ಗಡಿಗಳನ್ನು ನಿಗದಿಪಡಿಸಲು ಸೂಚಿಸಿದರು. ಇದಕ್ಕೆ ಗುರಿ ನಿಗದಿಪಡಿಸಿ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಸೂಚಿಸಿದರು.
ಅಮೃತ್ ಗ್ರಾಮ ಪಂಚಾಯತ್ ಯೋಜನೆ ಯಡಿ 750 ಗ್ರಾಮ ಪಂಚಾಯತ್ ಗಳಿಗೆ ತಲಾ 25 ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜೂನ್ ಅಂತ್ಯಕ್ಕೆ ಪೂರ್ಣಗೊಳಿಸುವುದು. ಗ್ರಾಮ ಪಂಚಾಯಿತಿ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು. ಜಲಜೀವನ್ ಮಿಷನ್ ಯೋಜನೆಯ ಬ್ಯಾಚ್ – 1 ರಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸುವುದು ಎಂದವರು ಸೂಚನೆ ನೀಡಿದರು.
ಬ್ಯಾಚ್ ಎರಡರ ಟೆಂಡರ್ ಕಾಮಗಾರಿಗಳನ್ನು ಈ ತಿಂಗಳೊಳಗೆ ಪೂರ್ಣಗೊಳಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.