ಬೆಂಗಳೂರು: ರಾಜ್ಯದ ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿ ಕರ್ನಾಟಕದ ಪ್ರವಾಸೋದ್ಯಮ ನಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಿರುವ ಕರ್ನಾಟಕದ ಏಳು ಅದ್ಭುತಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಕರ್ನಾಟಕ ದೇವರ ಸೃಷ್ಟಿಯ ಅದ್ಭುತಗಳ ನಾಡು. ಹತ್ತು ಆಗ್ರೋ ವಲಯಗಳಿವೆ. ಈ ರೀತಿಯ ಹಾವಾಮಾನ, ವೈವಿಧ್ಯಮಯ ಸಂಪತ್ತು ಎಲ್ಲಿ ಇದೆಯೋ ಅಲ್ಲಿನ ನಿಸರ್ಗದ ರಮ್ಯ ತಾಣವಾಗುತ್ತದೆ. ಇಲ್ಲಿನ ನೀರು ಹಾಗೂ ಮಣ್ಣಿನ ಗುಣ ವಿಶಿಷ್ಟವಾಗಿದೆ. 330 ಕಿಮೀ ಕರಾವಳಿ, ಅದಕ್ಕೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟ, ಪಶ್ಚಿಮಘಟ್ಟಗಳಲ್ಲಿ ಕೈಲಾಸ ಎಂಬ ಕಲ್ಪನೆಯ ಎಲ್ಲಾ ಗುಣಲಕ್ಷಣಗಳು ಅಲ್ಲಿವೆ ಎಂದರು. ಅತ್ಯುತ್ತಮ ಬಯಲುಸೀಮೆ, ಅದಕ್ಕೆ ಹೊಂದಿಕೊಂಡಿರುವಂತೆ ನಮ್ಮ ನದಿಗಳು. ಎಲ್ಲಾ ನದಿಗಳು ಪಶ್ಚಿಮದಲ್ಲಿ ಹುಟ್ಟಿ, ಪೂರ್ವಕ್ಕೆ ಹರಿಯುತ್ತವೆ. ರಾಜ್ಯವನ್ನು ದಾಟಿ ಬಂಗಾಲ ಕೊಲ್ಲಿಗೆ ಸೇರುತ್ತವೆ. ಎಲ್ಲಿ ನದಿಗಳು ಹರಿಯುತ್ತವೆ ಅಲ್ಲಿ ಸಂಸ್ಕøತಿ ಹಾಗೂ ನಾಗರಿಕತೆ ಬೆಳೆಯುತ್ತವೆ. ನಮ್ಮನ್ನಾಳಿದ ರಾಷ್ಟ್ರಕೂಟ, ಹೊಯ್ಸಳರಿಂದ ವಿಜಯನಗರ ಸಾಮ್ರಾಜ್ಯದವರೆಗೆ ಶಿಲಾಶಾಸನಗಳನ್ನು ಬಿಟ್ಟುಹೋಗಿದ್ದಾರೆ. ‘ಆಳುವುದು ಬೇರೆ ಆಡಳಿತ ಮಾಡುವುದು ಬೇರೆ’ ಎನ್ನುವ ತತ್ವವನ್ನು ಶಿಲಾಶಾಸನದಲ್ಲಿ ತಿಳಿಸಿದ್ದಾರೆ. ಇವುಗಳನ್ನು ಹುಡುಕಿ ಜನರ ಮುಂದೆ ಇಡುವ ಕೆಲಸಗಳಾಗಿದ್ದರೂ ಇನ್ನೂ ಪರಿಣಾಮಕಾರಿಯಾಗಿ ಆಗಬೇಕು ಎಂದರು.
ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಪ್ರವಾಸಿ ತಾಣಗಳನ್ನು ಗುರುತಿಸಿ, ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಮಾಡಿ ಅವುಗಳ ಫೋಟೋಗಳ ಕ್ಯಾಲೆಂಡರ್ ಮಾಡಿ ಎಲ್ಲಾ ಹೆದ್ದಾರಿಗಳಲ್ಲಿ ಹಾಕಿಸಲಾಗಿತ್ತು. ಅದಕ್ಕೆ ಅದ್ಭುತವಾದ ಪ್ರತಿಕ್ರಿಯೆ ದೊರೆತಿತ್ತು. ಕನಕದಾಸರ ಅರಮನೆಯಲ್ಲಿ ಅವರ ಜೀವನಚರಿತ್ರೆಯನ್ನು ಬಿಂಬಿಸುವ ಸ್ಟುಡಿಯೋ ಮುಂತಾದವುಗಳನ್ನು ನಿರ್ಮಿಸಲಾಗಿದೆ. ದೇಶದಲ್ಲಿ ಮೂರನೇ ಅತಿ ದೊಡ್ಡ ನವಿಲು ಉದ್ಯಾನವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಈ ರೀತಿ ತಾಲ್ಲೂಕು ಸರ್ಕಿಟ್ ಅಭಿವೃದ್ಧಿಗೊಳಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದೊಂದು ಅತ್ಯುತ್ತಮ ಅಭಿಯಾನವಾಗಿದೆ. ಪ್ರವಾಸೀ ತಾಣಗಳ ಹುಡುಕಾಟವೇ ಒಂದು ಚಿಮ್ಮುಹಲಗೆ. ಅಲ್ಲಿ ರತ್ನಗಳೇ ಸಿಗಬಹುದು. ಇತಿಹಾಸ ಮರುಸೃಷ್ಟಿಸುವ ಅವಕಾಶವಿದು. ನಿರೀಕ್ಷೆ ಮೀರಿ ಪ್ರತಿಕ್ರಿಯೆ ದೊರಕುವ ವಿಶ್ವಾಸವಿದೆ. ಬೀದರ್,ಕಲಬುರ್ಗಿ, ಬಾದಾಮಿ, ಲಕ್ಕುಂಡಿ, ಮುಂತಾದವುಗಳನ್ನು ಉತ್ತಮವಾಗಿ ನಿರ್ವಹಿಸಿದರೂ ಪ್ರವಾಸಿಗರನ್ನು ಆಕರ್ಷಿಸಬಹುದು. ಹಂಪಿ, ಮೈಸೂರು ಸರ್ಕಿಟ್‍ಗಳನ್ನು ಸೃಜಿಸಲಾಗಿದೆ. ನಂದಿ ಬೆಟ್ಟದಲ್ಲಿ ರೋಪ್ ವೇ, ಹಾಗೂ ಜೋಗ್ ಜಲಪಾತದಲ್ಲಿಯೂ ರೇಪ್ ವೇಗೆ ಚಾಲನೆ ದೊರೆತಿದೆ. ಯಾಣ, ಮುಳ್ಳಯ್ಯನಗಿರಿ, ಚಾಮುಂಡಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ, ಯಾತ್ರಿಕರು ಹೊರರಾಜ್ಯಗಳಿಗೆ ಭೇಟಿ ನೀಡುತ್ತಾರೆ ಅಲ್ಲಿ ರಾಜ್ಯದ ಸೌಕರ್ಯಗಳು, ಅಂಜನಾದ್ರಿ ಬೆಟ್ಟದಲ್ಲಿ ರೋಪ್ ವೇ ಹಾಗೂ ಸುತ್ತಮುತ್ತಲಿನ ಸ್ಥಳಗಳ ಅಭಿವೃದ್ದಿಗಾಗಿ ಈ ವರ್ಷ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ನಂದಿಬೆಟ್ಟ, ಜೋಗ ಜಲಪಾತಕ್ಕೆ ಸಿಆರ್ ಜೆಡ್ ಮಾರ್ಗಸೂಚಿಗಳನ್ನು ಪಡೆದುಕೊಂಡು ಕರಾವಳಿ ಭಾಗವನ್ನೂ ಒಳಗೊಂಡಂತೆ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಕರ್ನಾಟಕದ ಏಳು ಅದ್ಭುತಗಳು ಅಭಿಯಾನ ರಾಜ್ಯದ ಪ್ರವಾಸೋದ್ಯಮ ಬ್ರಾಂಡಿಂಗ್ ಗೆ ಮುನ್ನುಡಿ ಬರೆದಿದೆ. ರಮೇಶ್ ಅರವಿಂದ್ ಅತ್ಯಂತ ಸೂಕ್ತ ರಾಯಭಾರಿಯಾಗಿದ್ದಾರೆ. ಅಭಿಯಾನದ ಯಶಸ್ಸು ಕರ್ನಾಟಕದ ಹಾಗೂ ರಾಜ್ಯದ ಪ್ರವಾಸೋದ್ಯಮದ ಯಶಸ್ಸು ಆಗಲಿದೆ. ಕನ್ನಡನಾಡು ನೈಸರ್ಗಿಕವಾಗಿ ಅದ್ಭುತವಾಗಿರುವ ನಾಡು. ಅಭಿಯಾನದ ಮೂಲಕ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ಇಲ್ಲಿ ಏಳು ಅದ್ಭುತಗಳನ್ನು ಹುಡುಕುವ ಅಭಿಯಾನ ಯಶಸ್ವಿಯಾಗಲಿ ಎಂದರು.
ರಾಜ್ಯ ಮುನ್ನಡೆಯಬೇಕೆಂಬ ಹಂಬಲ ಕನ್ನಡಪ್ರಭ ಸಮೂಹಕ್ಕೆ ಇರುವುದು ಸ್ವಾಗತಾರ್ಹ. ನಮ್ಮಲ್ಲಿರುವುದನ್ನು ನೆನಪು ಮಾಡಿಕೊಳ್ಳುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು. ಪ್ರವಾಸೋದ್ಯಮ ಬೆಳವಣಿಗೆಗೆ ಹಂಪಿಯವರೇ ಆದ ಸಚಿವ ಆನಂದ್ ಸಿಂಗ್ ಅವರು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಅಭಿಯಾನದ ಲಾಂಛನ ಬಿಡುಗಡೆ ಹಾಗೂ ವೆಬ್ ಸೈಟ್ ಉದ್ಘಾಟನೆಯನ್ನು ನೆರವೇರಿಸಿದರು.
ಸಮಾರಂಭದಲ್ಲಿ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ನಟ ಹಾಗೂ ಅಭಿಯಾನದ ರಾಯಭಾರಿಗಳಾದ ರಮೇಶ್ ಅರವಿಂದ್, ಏಷ್ಯಾನೆಟ್ ನ್ಯೂಸ್ ನೆಟ್‍ವರ್ಕ್‍ನ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಾಲ್ರಾ, ಸಿಇಒ ನೀರಜ್ ಕೊಹ್ಲಿ, ಬ್ಯುಸಿನೆಸ್ ಹೆಡ್ ಅಪ್ಪಚ್ಚು, ಜಾಹೀರಾತು ವಿಭಾಗದ ಉಪಾಧ್ಯಕ್ಷ ಅನಿಲ್ ಸುರೇಂದ್ರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹಾಗೂ ಜಂಟಿ ಆಯುಕ್ತೆ ಶ್ವೇತಾ ಉಪಸ್ಥಿತರಿದ್ದರು.