ಬೆಂಗಳೂರು: ಬಿಜೆಪಿ ನಾಯಕರು ಹಾಗೂ ಹಿಂದುಳಿದ ವರ್ಗಗಳ ಘಟಕ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ವಿನಾಕಾರಣ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಅಧಿಕಾರಕ್ಕೋಸ್ಕರ ಕೆಲವರು ಬಿಜೆಪಿಗೆ ಹೋಗಿದ್ದಾರೆ ಎಂದರೇ ಹೊರತು ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಬಿಜೆಪಿಯವರು ವಿಚಾರಗಳನ್ನು ತಿರುಚುವುದರಲ್ಲಿ ನಿಪುಣರು. ಸುಳ್ಳು, ವಿಷಯಾಂತರ ಮಾಡುವುದು ಬಿಜೆಪಿ ಹುಟ್ಟುಗುಣ. ರಾಜ್ಯ ಹಾಗೂ ದೇಶದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವಿಷಯಾಂತರ ಮಾಡಿಕೊಂಡು ಬರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಬಿಟ್ ಕಾಯಿನ್ ಸುದ್ದಿ ಕಾವು ಪಡೆದುಕೊಳ್ಳುತ್ತಿದ್ದಂತೆ ಜನರ ಗಮನ ಬೇರೆಡೆ ಸೆಳಎಯಲು ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ ಎಂದು ದೂರಿದರು.
ಬಿಟ್ ಕಾಯಿನ್ ಆನ್ಲೈನ್ ಮೂಲಕ ನಡೆಯುವ ಡಿಜಿಟಲ್ ಕರೆನ್ಸಿಯಾಗಿದೆ. ಇದರಲ್ಲಿ ಅನೇಕರು ಬಂಡವಾಳ ಹೂಡುತ್ತಿದ್ದಾರೆ. ಆದರೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆದರ್ ಲೆಂಡ್, ಮಲೇಷ್ಯಾ, ಅಮೆರಿಕ ಬೇರೆ ಬೇರೆ ದೇಶಗಳಲ್ಲಿ ಹ್ಯಾಕ್ ಮಾಡಿ ಸಾವಿರಾರು ಕೋಟಿ ಹಣ ಮಾಡಿರುವುದು ಅಪರಾಧವಾಗಿದೆ. ಹ್ಯಾಕ್ ಮಾಡಿರುವ ವ್ಯಕ್ತಿಗೆ ಪ್ರಭಾವಿ ನಾಯಕರ ಸಂಪರ್ಕವಿದೆ. ಆಡಳಿತ ಪಕ್ಷದಲ್ಲಿರುವವರು ಪ್ರಭಾವಿ ನಾಯಕರಾಗಿರುತ್ತಾರೆಯೇ ಹೊರತು ವಿರೋಧ ಪಕ್ಷದವರು ಪ್ರಭಾವಿ ನಾಯಕರಾಗಿರುವುದಿಲ್ಲ ಎಂದರು.
ಇದರಲ್ಲಿ ಪ್ರಭಾವಿ ನಾಯಕರ ಮಗ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಊಹಾಪೋಹವಿದೆ ಎಂದ ರಾಮಲಿಂಗಾ ರೆಡ್ಡಿ, ಈ ಪ್ರಕರಣದ ತನಿಖೆ ಸಿಬಿಐಗೆ ಪ್ರಕರಣ ಹೋದಮೇಲೆ ಗೆಜೆಟ್ ಆಗಿರಬೇಕಲ್ಲವೇ? ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪವಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಸರ್ಕಾರ ಯಾವಾಗ ಇದರ ತನಿಖೆಯನ್ನು ಸಿಬಿಐ, ಇಡಿಗೆ ನೀಡಿದೆ ಎಂದು ತಿಳಿಸಲಿ ಎಂದರು.
ಈ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ಮಾಡಲಿ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ಮಾತ್ರ ಇದರಲ್ಲಿ ಸತ್ಯಾಂಶ ಹೊರಬರುತ್ತದೆ. ಇಲ್ಲವಾದರೆ ಈ ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆ ಎಂಬ ಸುದ್ದಿ ಇದೆ. ಪ್ರಕರಣ ತನಿಖೆ ನಡೆಯುವ ಹಂತದಲ್ಲಿ ನಾವು ಯಾವುದೇ ಮಾಹಿತಿ ಹೇಳಲು ಸಾಧ್ಯವಿಲ್ಲ. ನಿಷ್ಪಕ್ಷಪಾತ ತನಿಖೆಯಾದರೆ ಸರ್ಕಾರಕ್ಕೆ ಕಂಟಕ ಇದೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಇದ್ದರೂ ಹಗರಣದಲ್ಲಿ ಭಾಗಿಯಾದವರಿಗೆ ಸಮಸ್ಯೆ ಎದುರಾಗುತ್ತದೆ’ ಎಂದರು.
ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ: ತಿಮ್ಮಾಪುರ್
‘ಸಿಂದಗಿಯಲ್ಲಿ ನಮ್ಮ ಸಮಾಜದ ಸಮಾವೇಶ ಮಾಡಿದಾಗ ಅಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ಬಿಜೆಪಿಯಲ್ಲಿರುವ ದಲಿತ ಮುಖಂಡರು ದಲಿತರಿಗೆ ಅನ್ಯಾಯವಾಗುವ ಪಕ್ಷದಲ್ಲಿದ್ದಾರೆ ಎಂದರೇ ಹೊರತು. ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರು ದಲಿತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆ ಕೊಟ್ಟಿದ್ದಾರೆ. ಸಾಲ ಸೌಲಭ್ಯ, ಎಸ್ಸಿ, ಎಸ್ಟಿ ಸಮುದಾಯದವರಿಗೆ ಮುಂಬಡ್ತಿ, ಗುತ್ತಿಗೆದಾರರಿಗೆ 1 ಕೋಟಿವರೆಗೂ ಮೀಸಲಾತಿ. ಸ್ಕಾಲರ್ ಶಿಪ್ ಕೊಟ್ಟರು. ಆದರೆ ಬಿಜೆಪಿ ಏನು ಮಾಡಿದೆ? ಗುತ್ತಿಗೆದಾರರಿಗೆ ನೀಡಲಾಗಿದ್ದ ಮೀಸಲಾತಿ ಕಿತ್ತುಹಾಕಿದರು. ಕಾರಜೋಳ ಸಾಹೇಬರೇ ನೀವು ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ? 344 ಮಾತ್ರ. 18 ಸಾವಿರ ಕೋಟಿ ಹಣದಲ್ಲಿ 6278 ಕೋಟಿ ಬಿಡುಗಡೆ ಮಾಡಿದ್ದು, ಶೇ.28ರಷ್ಟು ಮಾತ್ರ ಖರ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ದಲಿತರು ಎಂದು ಹೇಳಿಕೊಂಡು ಓಡಾಡುವ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರೇ ನೀವು ವಿದ್ಯಾರ್ಥಿಗಳಿಗೆ ಕಳೆದ 6 ತಿಂಗಳಿಂದ ಸ್ಕಾಲರ್ ಶಿಪ್ ಯಾಕೆ ಕೊಟ್ಟಿಲ್ಲ. ದಲಿತರ ಮೇಲೆ ಕಾಳಜಿ ಇರುವವರು ಯಾಕೆ ಅದನ್ನು ಕೇಳುತ್ತಿಲ್ಲ? 781 ಕೋಟಿ ಕೊಡಬೇಕು, ಆದರೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ನೀವು ಕೇಂದ್ರ ಸರ್ಕಾರದಲ್ಲಿದ್ದು ನೀವು ದಲಿತರ ಪರವಾಗಿ ಏನು ಮಾಡಿದ್ದೀರಿ? ಸಿದ್ದರಾಮಯ್ಯನವರೂ ಇದನ್ನೇ ಹೇಳಿದ್ದು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಆರ್ ಬಿ ತಿಮ್ಮಾಪುರ್, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ ಕೃಷ್ಣಪ್ಪ, ಮಾಜಿ ಮಹಾಪೌರರಾದ ಎಂ ರಾಮಚಂದ್ರಪ್ಪ, ಜೆ ಹುಚ್ಚಪ್ಪ ಅವರೂ ಇದ್ದರು.