ಬೆಂಗಳೂರು: ‘ಪೃಥ್ವಿ’ಯ ಮಡಿಲು ಸೇರಿದ ಅಪ್ಪು ತನ್ನ ಕಣ್ಣುಗಳನ್ನು ದಾನ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದರೆ, ಬೆಂಗಳೂರಿನ ನಾರಾಯಣ ನೇತ್ರಾಲಯದ ವೈದ್ಯರು ಕೂಡಾ ವಿಶೇಷ ಸಾಧನೆ ಮೂಲಕ ನಾಲ್ವರಿಗೆ ಬೆಳಕಾಗಿದ್ದಾರೆ. ಈ ನಿಟ್ಟಿನಲ್ಲಿ ನಾರಾಯಣ ನೇತ್ರಾಲಯದ ತಜ್ಞ ವೈದ್ಯರಾದ ಡಾ.ಭುಜಂಗ ಶೆಟ್ಟಿ ಹಾಗೂ ಡಾ.ರೋಹಿತ್ ಶೆಟ್ಟಿ ಬಳಗದ ಸಾಧನೆ ಜಗತ್ತಿನ ಗಮನ ಸೆಳೆದಿದೆ.
ಅಕಾಲಿಕವಾಗಿ ಮರಣವನ್ನಪ್ಪಿದ ಪುನೀತ್ ರಾಜ್‌ಕುಮಾರ್ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿತ್ತು. ಇಂತಹಾ ಸಂದರ್ಭದಲ್ಲಿ ಎರಡು ಕಣ್ಣುಗಳು ಇಬ್ಬರಿಗೆ ಬೆಳಕಾಗುವುದು ಸಾಮಾನ್ಯ. ಆದರೆ ಪುನೀತ್ ಅವರ ಅಕ್ಷಿಯನ್ನು ನಾಲ್ವರಿಗೆ ಕಸಿ ಮಾಡುವ ಮೂಲಕ ‘ನಾರಾಯಣ ನೇತ್ರಾಲಯ’ದ ವೈದ್ಯರು ವೈದ್ಯಕೀಯ ಲೋಕದಲ್ಲಿ ಮತ್ತೊಂದು ಅಚ್ಚರಿ ಸೃಷ್ಟಿಸಿದ್ದಾರೆ.
ಡಾ.ರೋಹಿತ್ ಸಾರಥ್ಯದ ತಂಡದಲ್ಲಿ ಡಾ.ಯತೀಶ್ ಶಿವಣ್ಣ, ಡಾ.ಹರ್ಷಾ ನಾಗರಾಜ್, ಪ್ರಾರ್ಥನಾ ಭಂಡಾರಿ, ಡಾ.ಶರೋನ್ ಡಿಸೋಜ ಡಾ.ಗೈರಿಕ್ ಮತ್ತು ಡಾ.ವೀರೇಶ್ ಇದ್ದರು. ಈ ವೈದ್ಯರ ಸಾಧನೆ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ‘ನಾರಾಯಣ ನೇತ್ರಾಲಯ’ದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ, ಇದು ಅಪೂರ್ವ ಪ್ರಯತ್ನ ಎಂದರು.
ಕಣ್ಣನ್ನು ಸೀಳುವ ಮೂಲಕ ಎರಡು ಪದರಗಳನ್ನು ಬೇರ್ಪಡಿಸಿ ಒಂದು ಅಕ್ಷಿಯನ್ನು ಇಬ್ಬರು ಅಂಧರಿಗೆ ಕಸಿ ಮಾಡಲಾಗಿದೆ. ಹೀಗೆ ಪುನೀತ್ ಅವರ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬರಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ಭುಜಂಗ ಶೆಟ್ಟಿ ವಿವರಿಸಿದ್ದಾರೆ.
ಕಣ್ಣಿನ ಮೇಲ್ಪದರಿನ ಕಾರ್ನಿಯಾಲ್ ಕಾಯಿಲೆ ಇರುವವರಿಗೆ ಹಾಗೂ ಎಂಡೋಥೀಯಲ್ (ಆಳವಾದ ಕಾರ್ನಿಯಾಲ್ ಪದರದ) ಸಮಸ್ಯೆ ಇರುವವರಿಗೆ ಈ ಕಸಿ ಮಾಡಲಾಗಿದ್ದು, ಒಬ್ವರ ಕಣ್ಣುಗಳನ್ನು ಒಂದೇ ದಿನದಲ್ಲಿ ನಾಲ್ವರಿಗೆ ಕಸಿ ಮಾಡಿರುವ ಸಾಧನೆ ರಾಜ್ಯದಲ್ಲಿ ಇದೇ ಮೊದಲು ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.