ಬೆಂಗಳೂರು: ಒಬ್ಬರ ಜಮೀನನ್ನು ಬೇರೊಬ್ಬರು ಕಬಳಿಸುವ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಅಧಿಕಾರಿಗಳೇ ಸೇರಿ ಯಾರದ್ದೋ ನಿವೇಶನವನ್ನು ಇನ್ಯಾರದ್ದೋ ಹೆಸರಿಗೆ ನೋಂದಾಯಿಸಿ ಲೋಪ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಈ ಪ್ರಕರಣ ಕುರಿತಂತೆ ಮಾನವ ಹಕ್ಕು ಹೋರಾಟಗಾರರ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ತನಿಖೆಗೆ ಚಿಂತನೆ ನಡೆಸಿದೆ.
ಏನಿದು ಪ್ರಕರಣ..?
ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಇಂದ್ರಾ ಬಾಯಿ ಎಂಬವರಿಗೆ ಸೇರಿದ್ದೆನ್ನಲಾದ, ಹಚಿನ್ಸ್ ರೋಡ್ ಬಳಿಯ ನಿವೇಶನವೊಂದರ ವಿಚಾರದಲ್ಲಿ ಮಾಲೀಕರು ಮತ್ತು ಇತರರ ನಡುವೆ ಕಾನೂನು ಸಮರ ನಡೆಯುತ್ತಿರುವಾಗಲೇ, ಸಿ.ಮೇರಿ ಎಂಬವರು ಕೋರ್ಟ್ ದಾಖಲೆಗಳೆಂದು ಹೇಳಿ ಕೆಲವು ದಾಖಲೆಗಳನ್ನು ನೀಡಿ ನಿವೇಶನವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಲು ಶಿವಾಜಿನಗರ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಈ ನಿವೇಶನ ಕುರಿತಂತೆ ಮೂಲ ಮಾಲೀಕರ ಜೊತೆ ಬೇರೊಬ್ಬರು ಧಾವೆ ಹೂಡಿದ್ದು ಈ ಬಗ್ಗೆ ತಿಳಿದಿದ್ದರೂ ಸಬ್‌ರಿಜಿಸ್ಟ್ರಾರ್ ಇದೇ ನಿವೇಶನವನ್ನು ಮೂರನೇ ವ್ಯಕ್ತಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ ಎಂಬುದು ಆರೋಪ. ಸಿ.ಮೇರಿ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ಅಕ್ರಮ ಎಸಗಿದ್ದಾರೆಂದು ಮಾಲೀಕರೆಂದು ಹೇಳಿಕೊಳ್ಳುತ್ತಿರುವ ಇಂದ್ರಾ ಬಾಯಿ ಅವರು ಪುಲಕೇಶಿನಗರ ಠಾಣೆಯಲ್ಲಿ ದೂರು (ಕ್ರೈಂ ನಂ-0120/2019) ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶಿವಾಜಿನಗರದ ಸಬ್ ರಿಜಿಸ್ಟ್ರಾರ್ ಗುರು ರಾಘವೇಂದ್ರ ಸೇರಿದಂತೆ ನಾಲ್ವರು ಆರೋಪಿಗಳಾಗಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ 01.07.2019ರಂದು ಪ್ರಕರಣ ದಾಖಲಾಗಿ ಒಂದು ವರ್ಷ ಕಳೆದರೂ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂಬುದು ಇಂದ್ರಾ ಬಾಯಿ ಅವರ ಆರೋಪ.
ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ ಸಂಸ್ಥೆ
ಈ ನಡುವೆ, ನಿವೇಶನವನ್ನು ಬೇರೊಬ್ಬರಿಗೆ ಅಕ್ರಮವಾಗಿ ನೋಂದಣಿ ಮಾಡಿರುವ ಹಾಗೂ ಮೂಲ ದಾಖಲೆಗಳಲ್ಲಿ ಪರಿಶೀಲಿಸದೆ ಹೆಸರು ಬದಲಾಯಿಸಿರುವ ಆರೋಪ ಎದುರಿಸುತ್ತಿರುವ ಸಬ್ ರಿಜಿಸ್ಟರ್ ಹಾಗೂ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ವಿರುದ್ದ ಪ್ರಾಸಿಕ್ಯೂಶನ್ ತನಿಖೆಗೆ ಅನುಮತಿ ಕೋರಿ ಮಾನವ ಹಕ್ಕು ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಎಸ್.ಖಾನಾಪುರಿ ಅವರು ಸಕ್ಷಮ ಪ್ರಾಧಿಕಾರಗಳಿಗೆ ಮನವಿ ಸಲಿಸಿದ್ದಾರೆ.
ಭ್ರಷ್ಟಾಚಾರ ಎಸಗುವ ಉದ್ದೇಶದಿಂದ ಅಕ್ರಮವಾಗಿ ನಿವೇಶನ ನೋಂದಾಯಿಸಿರುವ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಯ ಅಗತ್ಯದ ಬಗ್ಗೆ ಸರ್ಕಾರಕ್ಕೆ ಸಕಲ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಎಂ.ಎಸ್.ಖಾನಾಪುರಿ ತಿಳಿಸಿದ್ದಾರೆ.
ಈ ನಡುವೆ, ಈ ಪ್ರಕರಣ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಯು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೂ ದೂರು ನೀಡಿದೆ. ಹಾಗಾಗಿ ಒತ್ತಡದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.