ಸಿಂಧಗಿ: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಕುಟುಂಬಕ್ಕೆ, ಜಾತ್ಯಾತೀತ ಜನತಾದಳ ಮತ್ತು ಸಿಂಧಗಿ ಕ್ಷೇತ್ರದ ನಡುವೆ ವಾತ್ಸಲ್ಯಪೂರ್ಣವಾದ ಕರುಳುಬಳ್ಳಿಯ ಸಂಬಂಧ ಇದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಣ್ಣಿಸಿದ್ದಾರೆ.
ಸಿಂಧಗಿ ಕ್ಷೇತ್ರದ ಹೊಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಮಾಡುವ ವೇಳೆ ಅವರು ಮಾತನಾಡಿದರು. ಸುಮಾರು ಮೂವತ್ತು ವರ್ಷಗಳ ಕಾಲ ದಿವಂಗತ ಮನಗೂಳಿ ಕಾಕಾ ಅವರು ದೇವೇಗೌಡರ ಕುಟುಂಬದ ಸದಸ್ಯರಂತೆ ಇದ್ದರು. ಅವರನ್ನು ದೇವೇಗೌಡರು ಸ್ವಂತ ಸಹೋದರನಂತೆ ನೋಡುತ್ತಿದ್ದರು. ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಸಲ ಗೆದ್ದ ಅವರನ್ನು ಎರಡೂ ಸಲವೂ ಪಕ್ಷ ಮಂತ್ರಿ ಮಾಡಿತ್ತು ಎಂದು ಕುಮಾರಸ್ವಾಮಿ ಅವರು ನೆನಪು ಮಾಡಿಕೊಂಡರು.
ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಆಗಿದ್ದಾಗ ದೇವೇಗೌಡರು ಸಿಂಧಗಿ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದರು. ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದರು. ಅದಕ್ಕೆ ಕುರುಹಾಗಿ ದೇವೇಗೌಡರು ಮತ್ತು ಮನಗೂಳಿ ಅವರಿಬ್ಬರ ಪ್ರತಿಮೆಗಳನ್ನು ಜನರು ಕೃತಜ್ಞತಾಪೂರ್ವಕವಾಗಿ ಇಲ್ಲಿ ಸ್ಥಾಪನೆ ಮಾಡಿದ್ದಾರೆ. ಇಂಥ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ನನ್ನದು ಎಂದು ಕುಮಾರಸ್ವಾಮಿ ಅವರು ನುಡಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗಲೂ ನೀರಾವರಿ ಯೋಜನೆಗಳು ಸೇರಿ ಹತ್ತಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇನೆ ಎಂದರು ಅವರು.
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯ ಗತಿ ಇಲ್ಲದೆ ಮನಗೂಳಿ ಕಾಕಾ ಅವರ ಪುತ್ರನನ್ನು ಹೈಜಾಕ್ ಮಾಡಿ ಅಭ್ಯರ್ಥಿ ಮಾಡಿರಬಹುದು. ಆದರೆ, ಕಾಕಾ ಅವರ ಜನಪ್ರಿಯತೆ, ಅವರು ಮಾಡಿದ ಸೇವೆ ಹಾಗೂ ಸಿಂಧಗಿ ಕ್ಷೇತ್ರಕ್ಕೆ ಜೆಡಿಎಸ್ ಕೊಟ್ಟಿರುವ ಕೊಡುಗೆಯನ್ನು ಹೈಜಾಕ್ ಮಾಡಲಾಗದು ಎಂದು ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದರು.
ಮನಗೂಳಿ ಕಾಕಾ ಮಾಡಿರುವ ಸಾಧನೆಗಳನ್ನು ಕಾಂಗ್ರೆಸ್ ಅಭ್ಯರ್ಥಿ ಈಗ ಹೈಜಾಕ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಸಾಧನೆಗಳ ಪುಸ್ತಕ ಮಾಡಿ ಹಂಚುತ್ತಿದ್ದಾರೆ. ಆದರೆ, ಸಿಂಧಗಿ ಜನತೆಗೆ ನಮ್ಮ ಪಕ್ಷದ ಮೇಲೆ ಅಪಾರ ಪ್ರೀತಿ, ನಂಬಿಕೆ ಇದೆ. ಮಾಡಿದ ಸೇವೆಯ ನೆನಪಿದೆ. ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ನಾಲಿಗೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎನ್ನುತ್ತಿದ್ದರೂ ಅದೇ ನಾಯಕರೂ ಕಳೆದ ಚುನಾವಣೆ ನಂತರ ಸರಕಾರ ಮಾಡಬೇಕು ಎಂದು ನಮ್ಮ ಪಕ್ಷದ ಬಾಗಿಲಲ್ಲಿ ನಿಂತಿದ್ದರು. ಯಾರು ನಮ್ಮ ಪಕ್ಷಕ್ಕೆ ಮತ ಹಾಕಬೇಡಿ ಎಂದು ಜನರಿಗೆ ಹೇಳಿದರೋ ಅವರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ದೇವೇಗೌಡರ ಮನೆ ಮುಂದೆ ನಿಂತರು. ಆದರೆ, ಸಿದ್ದರಾಮಯ್ಯ ಅವರ ಸುಳ್ಳು ಮಾತುಗಳಿಂದ ನಮ್ಮ ಪಕ್ಷಕ್ಕೆ ಆ ಚುನಾವಣೆಯಲ್ಲಿ ಹಾನಿ ಆಯಿತು ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಅಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ ಈಗ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಸೆಕ್ಯುಲರ್ ಮತಗಳನ್ನು ವಿಭಜಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸರಣಿ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.
ಯಾವ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬಾರದು ಎಂದು ಜನತೆಯನ್ನು ಕೋರಿದ ಹೆಚ್ ಡಿಕೆ ಅವರು, ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಅದರ ಫಲ ಬಿಜೆಪಿಗೆ ಹೋಗುತ್ತದೆ. ಈ ಕಾರಣಕ್ಕೆ ಜೆಡಿಎಸ್ ಸಿಂಧಗಿ ಜನರ ಸಹಜ ಆಯ್ಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.