ಬೆಂಗಳೂರು: ಮುಖ್ಯಮಂತ್ರಿ ನಿವಾಸ ಇಂದು ಕುತೂಹಲಕಾರಿ ಸನ್ಬಿವೇಶಕ್ಕೆ ಸಾಕ್ಷಿಯಾಯಿತು. ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳ ನಡುವೆಯೇ ಭಾರೀ ಸಂಖ್ಯೆಯಲ್ಲಿ ಸ್ವಾಮೀಜಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ.
ಮಂಗಳವಾರ ಹಲವಾರು ಸ್ವಾಮೀಜಿಗಳು ಸಿಎಂ ಅವರನ್ನು ಭೇಟಿಯಾಗಿ ಬೆಂಬಲ ಘೋಷಿಸಿದ್ದರು. ಬುಧವಾರ ಮತ್ತಷ್ಟು ಖಾವಿಧಾರಿಗಳು ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಪೈಕಿ ಹಲವು ಸ್ವಾಮೀಜಿಗಳು ಬಿಜೆಪಿ ಹೈಕಮಾಂಡ್ ವಿರುದ್ದ ಅಸಮಾಧಾನ ಹೊರಹಾಕಿದ್ದರು. ಬಿಎಸ್‌ವೈ ಅವರನ್ನು ಪದಚ್ಯುತಗೊಳಿಸಿದರೆ ಬಿಜೆಪಿಯು ಅಸ್ತಿತ್ವವನ್ನು ಕಳೆದುಕೊಳ್ಳಬಹುದೆಂದೂ ಎಚ್ಚರಿಕೆ ನೀಡಿದ್ದರು.
ಈ ಬೆಳವಣಿಗೆಗಳ ನಂತರ ಸ್ವಾಮೀಜಿಗಳ ಸಮೂಹಕ್ಕೆ ಕವರ್ ಹಂಚಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಏನಿದು ಕವರ್? ಸ್ವಾಮೀಜಿಗಳಿಗೆ ಹಂಚಿರುವ ಕವರ್‌ನಲ್ಲಿ ಇದ್ದದ್ದಾದರೂ ಏನು? ಎಂಬ ಕುತೂಹಲ ಹಲವರದ್ದು.
ಈ ಕುರಿತಂತೆ ನೆಟ್ಟಿಗರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ವೀರಶೈವ ಲಿಂಗಾಯತ ಸಮಾಜದಲ್ಲಿ ಮನೆಗೆ ಬಂದಂತಹಾ ಮಠಾಧೀಶರಿಗೆ ಕಾಣಿಕೆ ಕೊಡುವ ಪದ್ದತಿ ಇದೆ’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ‘ದರ್ಶನದ ನಂತರ ಪ್ರಸಾದ..’ ಎಂದು ಕಮೆಂಟ್ ಹಾಕಿದ್ದಾರೆ. ಮತ್ತೊಬ್ಬರು ‘…ಈ ಹಣ ದಾಸೋಹಕ್ಕೆ ಬಳಕೆಯಾಗುತ್ತದೆ’ ಎಂದಿದ್ದಾರೆ. ಆದರೆ ಬಹುಪಾಲು ಮಂದಿ ಈ ಸನ್ನಿವೇಶ ಬಗ್ಗೆ ಕಟು ಟೀಕೆ ಮಾಡಿದ್ದಾರೆ.