ಬೆಂಗಳೂರು: ಕಿರುತೆರೆಯ ಜನಪ್ರಿಯ ಧಾರವಾಹಿ ‘ಬಿಗ್ ಬಾಸ್’ ಶೋ ಸ್ಥಗಿತಗೊಳ್ಳುತ್ತಾ..? ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದು ಸಿನಿಮಾ ಚಿತ್ರೀಕರಣ, ಕಿರುತೆರೆ ಧಾರವಾಹಿ, ರಿಯಾಲಿಟಿ ಶೋಗಳ ಶೂಟಿಂಗ್ಗೂ ನಿರ್ಬಂಧ ಹೇರಿದೆ. ಹೀಗಿರುವಾಗ ‘ಬಿಗ್ ಬಾಸ್’ ಶೋ ಪರಿಸ್ಥಿತಿ ಏನು ಎಂಬ ಕಳವಳ ವ್ಯಕ್ತವಾಗಿತ್ತು. ಇದೀಗ ‘ಬಿಗ್ ಬಾಸ್’ ಶೋ ಪ್ರಸಾರವಾಗುತ್ತಿರುವ ಕಲರ್ಸ್ ಕನ್ನಡ ಚಾನೆಲ್ನ ಪ್ರಮುಖರೇ ಈ ಕುರಿತ ಸುಳಿವನ್ನು ನೀಡಿ ವೀಕ್ಷಕರಲ್ಲಿ ತಳಮಳ ಸೃಷ್ಟಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಪ್ರಮುಖರಲ್ಲೊಬ್ಬರಾದ ಪರಮೇಶ್ವರ್ ಗುಂಡ್ಕಲ್ ಅವರು ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದು, ‘…. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ’ ಎಂದೂ ಸಂದೇಶ ಹಂಚಿಕೊಂಡಿದ್ದಾರೆ.
ಪರಮೇಶ್ವರ್ ಗುಂಡ್ಕಲ್ ಅವರ ಪೋಸ್ಟ್ ಹೀಗಿದೆ..
ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.
ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ.
ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ.
ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ.



























































