ಗಣಿ, ಕ್ರಷರ್ ಉದ್ದಿಮೆದಾರರು ಸ್ಪೋಟಕ ಬಳಸಲು 90 ದಿನದೊಳಗೆ ಪರಾವನಗಿ.. ಗಣಿ ಮತ್ತು ಭೂ ವಿಜ್ಞಾನ ಸಚಿವ ನಿರಾಣಿ ಪ್ರಕಟ.. ಉದ್ಯಮ ನಷ್ಟದಲ್ಲಿರುವುದರ ಕಾರಣ ಈ ಕ್ರಮ ಅನಿವಾರ್ಯ ಎಂದ ನಿರಾಣಿ..
ಬೆಂಗಳೂರು: ನಷ್ಟದಲ್ಲಿರುವ ಗಣಿ ಮತ್ತು ಕ್ರಷರ್ ಉದ್ಯಮವನ್ನು ಪುನಾರಂಭಗೊಳಿಸುವ ನಿಟ್ಟಿನಲ್ಲಿ ಸ್ಪೋಟಕ ವಸ್ತುಗಳನ್ನು ಬಳಕೆ ಮಾಡಲು ಮಾಲೀಕರಿಗೆ 90 ದಿನದೊಳಗೆ ಲೈಸೆನ್ಸ್ ನೀಡುವ ಮಹತ್ವದ ನಿರ್ಧಾರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತೆಗೆದುಕೊಂಡಿದೆ.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ ಘಟನೆಯ ನಂತರ ಈ ಉದ್ಯಮ ನಷ್ಟದಲ್ಲಿದ್ದು, ಉದ್ದಿಮೆದಾರರು ಸ್ಪೋಟಕ ವಸ್ತುಗಳನ್ನು ಬಳಕೆ ಮಾಡಲು ಗಣಿ ಸುರಕ್ಷತಾ ಮಹಾನಿರ್ದೇಶನಾಲಯ (ಡಿಜಿಎಂಎಸ್) 90 ದಿನದಲ್ಲಿ ಪರಾವನಗಿ ನೀಡಲು ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಎರಡು ಉದ್ಯಮಗಳು ನಷ್ಟದಲ್ಲಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಆದಾಯ ಖೋತಾ ಆಗಿದ್ದು, ಸುಮಾರು ₹300 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಹೇಳಿದರು.
ಗಣಿ ಹಾಗೂ ಕ್ರಷರ್ ಉದ್ಯಮಕ್ಕೆ ಸ್ಪೋಟಕ ವಸ್ತುಗಳನ್ನು ಬಳಸುವುದು ಅನಿವಾರ್ಯವಾಗಿದೆ. ಅಭಿವೃದ್ಧಿ ಕಾರ್ಯ ಮುಂದುವರೆಯಬೇಕಾದರೆ ಇದು ಅತ್ಯಗತ್ಯ. ಈಗ ಸ್ಥಗಿತಗೊಂಡಿರುವ ಕಾರಣ ಕಚ್ಚ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಹೊರ ರಾಜ್ಯದವರು ದುಬಾರಿ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಉದ್ಯಮ ನಡೆಸುವ ಮಾಲೀಕರು ಇಲಾಖೆಯ ಷರತ್ತು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. 90 ದಿನದಲ್ಲಿ ಲೈಸೆನ್ಸ್ ಪಡೆಯುವುದಾಗಿ ಷರತ್ತುಪತ್ರಕ್ಕೆ ಸಹಿ ಹಾಕಬೇಕು. ಅಲ್ಲದೆ ಹಾಲಿ ಇರುವ ಲೈಸೆನ್ಸ್ ಹೊಂದಿರುವ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಇಂದಿನಿಂದಲೇ ಅನ್ವಯವಾಗುವಂತೆ ಉದ್ದಿಮೆದಾರರು ತಮ್ಮ ಉದ್ಯಮವನ್ನು ಆರಂಭಿಸಬಹುದು. ಪರಾವನಗಿ ನೀಡುವಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಷರತ್ತುಗಳನ್ನು ಒಳಪಡಿಸಿ ನೀಡಬಹುದು ಎಂದರು.
ಮಾಲೀಕರು ನಷ್ಟದಲ್ಲಿರುವುದರಿಂದ ಬ್ಯಾಂಕ್‍ಗಳಿಗೆ ಪ್ರತಿ ತಿಂಗಳು ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಚಟುವಟಿಕೆಗಳು ಸ್ತಬ್ದಗೊಂಡಿರುವ ಕಾರಣ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ ಎಂದು ಅತಂಕ ವಕ್ತಪಡಿಸಿದರು.
ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಷರ್ ಉದ್ಯಮವನ್ನು ಪುನರಾರಂಭೀಸಲು ಇದು ಅನುಕೂಲವಾಗಲಿದೆ ಎಂದು ಅವರು ಹಳಿದರು.
ರಾಜ್ಯದಲ್ಲಿ ಸುಮಾರು 2,500ಕ್ಕೂ ಹೆಚ್ಚು ಕಲ್ಲು ಕ್ವಾರಿ ಗಣಿ ಉದ್ಯಮಗಳಿವೆ. ಇದರಲ್ಲಿ ಶೇ.10ರಷ್ಟು ಮಾತ್ರ ಉದ್ದಿಮೆದಾರರು ಲೈಸೆನ್ಸ್ ಪಡೆದಿದ್ದರೆ, ಶೇ.90ರಷ್ಟು ಮಂದಿ ಲೈಸೆನ್ಸ್ ಪಡೆದಿಲ್ಲ ಎಂದು ಹೇಳಿದರು.
2 ಕೆಜಿವರೆಗೆ ಸ್ಪೋಟಕಗಳನ್ನು ಬಳಸಲು ಕಾಯ್ದೆಯಲ್ಲಿ ಅವಕಾಶವಿದೆ. 5 ಎಕರೆಗಿಂತ ಕಡಿಮೆ ಜಮೀನನ್ನಲ್ಲಿ ಗಣಿಗಾರಿಕೆ ಮಾಡುವವರಿಗೆ ಡಿಜಿಎಂಎಸ್ ಪರಾವನಿಯನ್ನು ಕಡ್ಡಾಯ ಮಾಬಾರದೆಂದು ಮನವಿ ಮಾಡಿದ್ದಾರೆ ಎಂದರು.
ಶೀಘ್ರದಲ್ಲೇ ಹೊಸ ಗಣಿಗಾರಿಕೆ ನೀತಿ ಜಾರಿಗೆ ಬರಲಿದೆ. ಇದು ದೇಶಕ್ಕೆ ಅನ್ವಯವಾಗುವಂತಹ ನೀತಿಯಾಗಲಿದೆ. 10 ಲಕ್ಷದೊಳಗೆ ಮನೆ ಕಟ್ಟುವವರಿಗೆ, ಹಾಗೂ ಪ್ರತಿಯೊಬ್ಬರಿಗೂ ಕೈಗೆಟುವ ದರದಲ್ಲಿ ಮರಳೂ ನೀತಿ ಸೇರಿದಂತೆ ಹತ್ತು ನೀತಿಯನ್ನು ಒಳ್ಳಗೊಳ್ಳಲಿದೆ ಎಂದರು.