ಅಲ್ಪ ಆದಾಯದ ದುಡಿಮೆಗಾಗಿ ಪ್ರಾಣತೆತ್ತ ‘ಆಶಾ ಕಾರ್ಯಕರ್ತೆ’: ಈಗಲಾದರೂ ನಮ್ಮ ನೋವು ತಿಳಿಯಿತೇ? ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಪ್ರಶ್ನೆ
ಮೈಸೂರು: ಸಾಂಸ್ಕೃತಿಕ ನಗರಿ ಸಮೀಪದ ಹುಲ್ಲಹಳ್ಳಿಯ ನಲವತ್ತಮೂರು ವರ್ಷದ ಚೆಲುವಮ್ಮ ಕೋವಿಡ್ ಮಾಹಿತಿ ಸಂಗ್ರಹಣೆಗಾಗಿ ಮನೆ ಮನೆ ತೆರಳಿ ಜಾಗೃತಿಯ ಕಹಳೆ ಊದುತ್ತಿದ್ದರು. ಊರ ಜನರ ಕ್ಷೇಮವನ್ನು ಬಯಸಿದ್ದ ಆಶಾ ಕಾರ್ಯಕರ್ತೆ ದಿಢೀರನೆ ಕಾಯಿಲೆಗೆ ಬಿದ್ದು ವಿಧಿಚಶರಾಗಿರುವ ಘಟನೆ ನಡೆದಿದೆ.
ರಕ್ತಹೀನತೆ ಮತ್ತು ಗರ್ಭಾಶಯಕ್ಕೆ ಸಂಬಂಧಿಸಿದ ತೊಂದರೆಗಳಿಂದ ನರಳಾಡಿ ಈ ಆಶಾ ಕಾರ್ಯಕರ್ತೆ ಮೃತಪಟ್ಟಿದ್ದು ಆಶಾ ಕಾರ್ಯಕರ್ತೆಯರು ಎಷ್ಟು ಸೇಫ್? ಎಂಬ ಭೀತಿ ಅವರನ್ನೇ ಕಾಡತೊಡಗಿದೆ.
ಚೆಲುವಮ್ಮ ಅವರ ಸಾವು ನ್ಯಾಯವೇ ಎಂದು ಆಶಾ ಕಾರ್ಯಕರ್ತೆಯರು ಪ್ರಶ್ನಿಸುತ್ತಿದ್ದಾರೆ. ಈ ಸಾವು ಮಹಿಳೆಯರ ಮತ್ತು ಆಶಾ ಕಾರ್ಮಿಕರ ದುಃಸ್ಥಿತಿಯನ್ನು ಬಹಿರಂಗ ಪಡಿಸುತ್ತಿದೆ. ಅತಿಯಾದ ಕೆಲಸ ಮತ್ತು ಅಲ್ಪ ವೇತನದ ಸಂದಿಗ್ಧತೆಯಲ್ಲಿ ಸಿಲುಕಿರುವ ಆಶಾ ಕಾರ್ಯಕರ್ತೆಯರು ಗೌರವ ಧನ ಹಾಗೂ ಸುರಕ್ಷತೆಯ ವಿಚಾರವಾಗಿ ಬಹುಕಾಲದಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಯಾವ ಬೇಡಿಕೆಗಳೂ ಸರ್ಕಾರಕ್ಕೆ ಕೇಳಿಸಲಿಲ್ಲ. ಇದೀಗ ನಮ್ಮ ರೋಧನೆ ಕೇಳಿಸಿತೇ ಎಂದು ಆಶಾ ಕಾರ್ಯಕರ್ತೆಯರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಗರ್ಭಾಶಯವನ್ನು ತೆಗೆದುಹಾಕಿದ ನಂತರ ಉಲ್ಬಣಗೊಂಡಿದ್ದ ರಕ್ತಹೀನತೆಯಿಂದಾಗಿ ಚೆಲುವಮ್ಮ ಕಳೆದ ಒಂದು ವಾರದ ಹಿಂದೆ ನಿಧನರಾಗಿದ್ದರು. ಚೆಲುವಮ್ಮ ಚಿಕಿತ್ಸೆ ಕುರಿತಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಇವರ ನೋವನ್ನು ಕೇಳುವವರು ಯಾರು ಎಂಬುದೇ ಪ್ರಶ್ನೆ ಎಂದು ಹೇಳುತ್ತಿದ್ದಾರೆ ಆಶಾ ಕಾರ್ಯಕರ್ತೆಯರು.