ಸಿಎಂ ಪುತ್ರ ವಿಜಯೇಂದ್ರರ ಆಪ್ತ ರುದ್ರೇಶ್ ಅಧ್ಯಕ್ಷತೆಯ KRIDL ನಿಗಮಕ್ಕೆ ನೆರವಾಗಲು ಪಾರದರ್ಶಕ ಕಾಯ್ದೆಗೆ ತಿದ್ದುಪಡಿ. ಮಾಧುಸ್ವಾಮಿ, ಶೆಟ್ಟರ್ ವಿರೋಧವಿದ್ದರೂ ಕೋಟ್ಯಾಂತರ ರೂಪಾಯಿ ಹಗರಣಕ್ಕೆ ನಾಂದಿ? ಇದು ಪರಿಶಿಷ್ಟರ ವಿರೋಧಿ ಕ್ರಮ ಎಂದ ಸಿದ್ದರಾಮಯ್ಯ..
ಬೆಂಗಳೂರು: ಹಾದಿ ತಪ್ಪಿರುವ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ನಿಗಮದ ಅಕ್ರಮಗಳಿಗೆ ಬಿಎಸ್‌ವೈ ಸರ್ಕಾರ ಬೆಂಗಾವಲಾಗಿ ನಿಂತಿದೆಯೇ? ಸಚಿವರಾದ ಮಾಧುಸ್ವಾಮಿ, ಜಗದೀಶ್ ಶೆಟ್ಟರ್ ಅವರ ಪ್ರತಿರೋಧದ ನಡುವೆಯೂ ಕೆಆರ್‌ಐಡಿಎಲ್ ನಿಗಮದ ಅಕ್ರಮಗಳಿಗೆ ನೆರವಾಗಲೆಂದು ಕೆಟಿಪಿಪಿ ಕಾಯ್ದೆಗೆ ರಾಜ್ಯಸರ್ಕಾರ ತಿದ್ದುಪಡಿ ತರಲು ಮುಂದಾಗಿದೆಯೇ? ಈ ಪ್ರಶ್ನೆಗಳು ಸಾರ್ವಜನಿಕವಲಯದಲ್ಲಿ ಪ್ರತಿಧ್ವನಿಸುತ್ತಿದ್ದು, ಅದರ ಜೊತೆಯಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ನ ಪುತ್ರ ವಿಜಯೇಂದ್ರರ ಆಪ್ತ ರುದ್ರೇಶ್‌ಗೆ ಅನುಕೂಲ ಕಲ್ಪಿಸಲು ಈ ಕಾಯ್ದೆ ತಿದ್ದುಪಡಿಯ ನಿರ್ಧಾರಕ್ಕೆ ಮುಂದಾದರೆಂಬ ಆರೋಪ ಕೇಳಿಬಂದಿದೆ.
ಏನಿದು ಕಾಯ್ದೆ ತಿದ್ದುಪಡಿ?
ಕಾಮಗಾರಿಗಳ ಹೆಸರಲ್ಲಿ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಕರ್ನಾಟಕ ಪಾರದರ್ಶಕ ಅಧಿನಿಯಮ (ಕೆಟಿಪಿಪಿ ಕಾಯ್ದೆ) ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ಕಾಮಗಾರಿಗಳನ್ನು ಟೆಂಡರ್ ಮೂಲಕ ಪಾರದರ್ಶಕವಾಗಿ ನಡೆಸಬೇಕಿದೆ. ಆದರೆ ಪ್ರವಾಹ, ನೈಸರ್ಗಿಕ ವಿಕೋಪದಂತಹಾ ಅನಿವಾರ್ಯ ಸಂದರ್ಭಗಳಲ್ಲಿ ನಿರ್ದಿಷ್ಟ ಪರಿಹಾರ ಕ್ರಮಗಳಿಗೆ ತುರ್ತು ಹಣ ಬಿಡುಗಡೆ ಮಾಡಲು ಕೆಟಿಪಿಪಿ ಅಧಿನಿಯಮ 4(ಜಿ)ಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನೇ ಆರ್ಥಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಹಣಕಾಸು ಇಲಾಖೆಯ ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಸಾವಿರಾರು ಕೋಟಿ ರೂಪಾಯಿ ಹಣ ವ್ಯಯಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಮೋದಿ ಅಭಿಮಾನಿಗಳೇ ರಾಜ್ಯ ಹೈಕೋರ್ಟ್ ಮೊರೆ ಹೋಗಿ ಕೆಟಿಪಿಪಿ ಕಾಯ್ದೆ ಅಪಬಳಕೆ ತಡೆಯುವ ಸಂಬಂಧ 4(ಜಿ) ಮೂಲಕ ಕಾಮಗಾರಿ ವಹಿಸುವುದಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಕಳೆದೊಂದು ವರ್ಷದಲ್ಲಿ ಕೆಆರ್‌ಐಡಿಎಲ್ ಮೂಲಕ ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ. ‘ನಮೋ ಸಮಾಜ್’ ಅಧ್ಯಕ್ಷ ಅನಿಲ್ ಕುಮಾರ್ ಜಿ.ಆರ್. ಅವರು ಈ 4(ಜಿ) ವಿರುದ್ದ ಕಾನೂನು ಹೋರಾಟ ನಡೆಸುತ್ತಿದ್ದು, ಹೈಕೋರ್ಟ್ ತಡೆಯಾಜ್ಞೆಯ ಆದೇಶದಿಂದ ಜಾರಿಕೊಳ್ಳಲು ಸರ್ಕಾರ ಈ ನಡೆ ಅನುಸರಿಸಿದೆ ಎನ್ನಲಾಗುತ್ತಿದೆ.
ಇದೀಗ ಬಿಎಸ್‌ವೈ ಸರ್ಕಾರವು ಕೆಆರ್‌ಐಡಿಎಲ್ ನಿಗಮಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲು ಕ್ರಮವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾಂಗ್ರೆಸ್ ಆಕ್ಷೇಪ..
ರಾಜ್ಯ ಸರ್ಕಾರದ ಈ ನಡೆ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯಿದೆಗೆ (ಕೆಟಿಪಿಪಿ) ತಂದಿರುವ ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ತಿದ್ದುಪಡಿ ಮೂಲಕ ಸರ್ಕಾರ ಶೋಷಿತ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಮೀಸಲು ಸೌಲಭ್ಯ ಒದಗಿಸುವ ಕಾನೂನನನ್ನು ದೇಶದ ಯಾವುದೇ ರಾಜ್ಯವೂ ಜಾರಿಗೆ ತಂದಿಲ್ಲ. ಆದರೆ, ಆ ಸೌಲಭ್ಯವನ್ನು ಬಿಜೆಪಿ ಸರ್ಕಾರ ಕಸಿದುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಹೇಳಿಕೆ ಮುಖ್ಯಾಂಶಗಳು :
ತಿದ್ದುಪಡಿ ಪ್ರಕಾರ ಎರಡು ಕೋಟಿ ರೂ.ಗಳವರೆಗಿನ ಕಾಮಗಾರಿಯನ್ನು ಟೆಂಡರ್ ಕರೆಯದೆ ಭೂ ಸೇನಾ ನಿಗಮಕ್ಕೆ (KRIDLಗೆ) ವಹಿಸಬಹುದು. ನಾವು ಅಧಿಕಾರದಲ್ಲಿ ಇದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ 50 ಲಕ್ಷ ರೂ.ಗಳವರೆಗಿನ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲು ನೀಡುವ ಕಾನೂನು ಜಾರಿಗೆ ತಂದಿದ್ದೆವು. ಇದರಿಂದ ಆ ವರ್ಗದ ಗುತ್ತಿಗೆದಾರರಿಗೆ ಅನುಕೂಲವಾಗಿತ್ತು. ನನ್ನ ಕೊನೆಯ ಬಜೆಟ್‍ನಲ್ಲಿ ಕಾಮಗಾರಿ ವೆಚ್ಚವನ್ನು ಒಂದು ಕೋಟಿ ರೂ.ಗಳಿಗೆ ಏರಿಸುವ ಘೋಷಣೆ ಮಾಡಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಜಾರಿಗೆ ಬರಲಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ.. KRIDLನಿಂದ 4(ಜಿ) ಸರ್ಕಸ್.. ‘ನಮೋ’ ಅಸ್ತ್ರಕ್ಕೆ ಶಾಸಕರೇ ಗಲಿಬಿಲಿ.
ಎರಡು ಕೋಟಿ ರೂ. ವರೆಗಿನ ಕಾಮಗಾರಿ ಟೆಂಡರನ್ನು ಭೂ ಸೇನಾ ನಿಗಮಕ್ಕೆ (KRIDLಗೆ) ವಹಿಸಿದರೆ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಭಾರಿ ಅನ್ಯಾಯವಾಗುತ್ತದೆ. ಅವರಿಗೆ ಒದಗಿಸಿರುವ ಮೀಸಲು ಸೌಲಭ್ಯವನ್ನು ಕಸಿಯುವ ಹುನ್ನಾರವನ್ನು ಸರ್ಕಾರ ನಡೆಸಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ದಲಿತರಿಗೆ ಕೇವಲ ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೂ ಸಿಗಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಆದರೆ, ರಾಜ್ಯ ಸರ್ಕಾರ ಈ ತಿದ್ದುಪಡಿ ಮೂಲಕ ದಲಿತರಿಗೆ ದೊಡ್ಡ ದ್ರೋಹ ಮತ್ತು ಅನ್ಯಾಯ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಯಾವುದೇ ಸರ್ಕಾರ, ಶೋಷಿತ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಕಾನೂನುಗಳನ್ನು ಜಾರಿಗೆ ತರಬೇಕೇ ಹೊರತು ಅವರಿಗೆ ಮಾರಕ ಆಗುವಂಥ ಕಾಯಿದೆಗಳನ್ನು ಅನುಷ್ಠಾನಗೊಳಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.