ಗದಗ್: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಸರ್ಕಾರದ ನೂತನ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಲ್ಲಿಯೂ ಗಮನ ಸೆಳೆಯಿತು. ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಗ್ರಾಮವಾಸ್ತವ್ಯಕ್ಕೆ ಚಾಲನೆ ನೀಡಿದರು.
ಜಿಲ್ಲೆಯ ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಿಗ್ಗೆ 10-30 ಕ್ಕೆ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ನೇರವಾಗಿ ಗ್ರಾಮದ ಅಂಗನವಾಡಿಗೆ ತೆರಳಿ ಅಲ್ಲಿದ್ದ ಪುಟ್ಟ ಮಕ್ಕಳಿಗೆ ಗುಲಾಬಿ ಹೂ ನೀಡಿ ಶುಭಕೋರಿದರು.
ಚುರ್ಚಿಹಾಳ ಹಾಗೂ ಕದಾಂಪೂರ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿದ ಅವರು, ಕದಾಂಪುರ ಗ್ರಾಮದ ವಸತಿ ಶಾಲೆ ಹಾಗೂ ಪ್ರಾಥಮಿಕ ಶಾಲೆಗೂ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆಯ ಮಕ್ಕಳು ನಮಗೆ ಶಾಲೆಗೆ ಬರಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಎಂದು ಡಿಸಿ ಮುಂದೆ ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಡಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಇದೇ ವೇಳೆ, ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಗ್ರಾಮದ ದಲಿತ ಕೇರಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ರಿಯಾಲಿಟಿ ಚೆಕ್:
ಹಳ್ಳಿಯಲ್ಲಿ ನಡೆಯುತ್ತಾ ಸಾಗಿದ ಜಿಲ್ಲಾಧಿಕಾರಿ, ಹಾದಿ ಮಧ್ಯೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತೆರಳಿ ಕಾಯಿನ್ಸ ಹಾಕುವ ಮೂಲಕ ಶುದ್ಧ ನೀರಿನ ಘಟಕದ ಸ್ಥಿತಿಗತಿ ಪರೀಕ್ಷೆ ನಡೆಸಿದ್ರು. ಒಂದಾದ ಮೇಲೆ ಒಂದರಂತೆ ಕ್ವಾಯಿನ್ ಗಳನ್ನು ಹಾಕಿದ್ರೂ ಸಹ ನೀರು ಮಾತ್ರ ಬರಲಿಲ್ಲ..ಈ ವೇಳೆ ಶುದ್ಧ ಕುಡಿಯುವ ನೀರಿನ ಘಟಕ ಚೆನ್ನಾಗಿದೆ ಅಂತ ಹೇಳಿದ್ದ ಅಧಿಕಾರಿಗಳು ಮುಖಭಂಗ ಅನುಭವಿಸುವಂತಾಯಿತು. ಸಾಕಷ್ಟು ಪೇಚಾಟ ನಡೆಸಿದ್ರೂ ಸಹ ಶುದ್ಧ ನೀರು ಬರದಿದ್ದಕ್ಕೆ ಡಿಸಿ ಬೇಸರಗೊಂಡು ನಾನು ಈ ರಸ್ತೆಯಲ್ಲಿ ಮರಳಿ ಬರುವಷ್ಟರಲ್ಲಿ ರಿಪೇರಿ ಮಾಡಿ ಅಂತ ಹೇಳಿ ಮುನ್ನೆಡೆದರು.
ಈ ನಡುವೆ, ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿ ಸುಂದರೇಶ ಬಾಬು ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಯಿದ್ದು,ಎಲ್ಲವನ್ನೂ ಒಮ್ಮೆಲೆ ಬಗೆಹರಿಸಲು ಸಾಧ್ಯವಿಲ್ಲ.ಕೆಲವೊಂದು ಸಮಸ್ಯೆಗಳಿಗೆ ಕಾಲಾವಕಾಶ ಬೇಕಾಗುತ್ತದೆ. ಅವೆಲ್ಲವನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.