ವರದಿ: ಹೆಚ್.ಎಂ.ಪಿ ಕುಮಾರ್
ಚಿತ್ರದುರ್ಗ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಸರ್ಕಾರದ ವಿನೂತನ ಕಾರ್ಯಕ್ರಮ ಚಿತ್ರದುರ್ಗದಲ್ಲಿ ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾಯಿತು.
ರಾಜ್ಯಾದ್ಯಂತ ಏಕಕಾಲಕ್ಕೆ ಶನಿವಾರ ಕಂದಾಯ ಸಚಿವರು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ್ದಾರೆ. ಅದರಂತೆ ಚಿತ್ರದುರ್ಗದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಡೀ ಜಿಲ್ಲಾಡಳಿತ ಮೊಳಕಾಲ್ಮೂರು ತಾಲ್ಲೂಕಿನ ಕಣಕುಪ್ಪೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದೆ.
ಜಿಲ್ಲಾಡಳಿತವೇ ಗ್ರಾಮಕ್ಕೆ ಬಂದ ಸಂಭ್ರಮದಲ್ಲಿದ್ದ ಗ್ರಾಮಸ್ಥರ ಸಂಭ್ರಮವನ್ನು ಮಾತೃಪ್ರೇಮ ತೋರುವ ಮೂಲಕ ಮತ್ತಷ್ಟು ದುಪ್ಪಟ್ಟುಗೊಳಿಸಿದರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಎಸ್ಪಿ ಜಿ.ರಾಧಿಕಾ.
ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಬಳಿಕ ಗ್ರಾಮದ ಗರ್ಭಿಣಿಯರಿಗೆ ಇಬ್ಬರು ತಾಯಿ ಸ್ಥಾನದಲ್ಲಿ ನಿಂತು ಸೀಮಂತ ಮಾಡಿದರು. ಈ ಮೂಲಕ ನಿಮ್ಮ ಜತೆ ನಾವಿದ್ದೇವೆ ಎಂಬ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ನಿಮ್ಮ ಕಷ್ಟ, ಕಾರ್ಪಣ್ಯ ತೊಂದರೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರಯತ್ನ ಮಾಡುತ್ತಾರೆ. ಇಂತಹ ಅವಕಾಶ ನಿಮ್ಮ ಮನೆ ಮುಂದೆಯೇ ಸಿಕ್ಕಿದೆ. ಹಾಗಾಗಿ ಎಲ್ಲಾ ಅಧಿಕಾರಿಗಳು ಇಲ್ಲಿ ಉಪಸ್ಥಿತರಿರುವುದರಿಂದ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಪಿ ಜಿ.ರಾಧಿಕಾ ಮಾತನಾಡಿ, ಇದು ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಗ್ರಾಮಸ್ಥರು ಇದರ ಉಪಯೋಗ ಮಾಡಿಕೊಳ್ಳಬೇಕು ಎಂದರು.
ಮೊಳಕಾಲ್ಮೂರು ತಹಸೀಲ್ದಾರ್ ಆನಂದ ಮೂರ್ತಿ, ಇಒ ಪ್ರಕಾಶ್ ನಾಯ್ಕ್, ತಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ಗುರುಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಸದಾಶಿವ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.