ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥರ ದಿಗ್ವಿಜಯ ಮಹೋತ್ಸವವು ಬಂದರು ನಗರಿ ಮಂಗಳೂರಿನ ಪಾಲಿಗೆ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಇದು ಅಪರೂಪದಲ್ಲಿ ಅಪರೂಪದ ಭಕ್ತಿಯ ಸಮಾರಂಭ. ಗೌಡ ಸಾರಸ್ವತ ಸಮುದಾಯದ ಶಕ್ತಿಯ ಅನಾವರಣವೂ ಹೌದು. ವೈದಿಕ ಪರಂಪರೆ ಸಾರುವ ಅನಸ್ಯ ಭಕ್ತಿ ಲಹರಿ ಅಲ್ಲಿ ಮೊಳಗಿತು. ಸಾವಿರಾರು ಭಕ್ತರು ಭಗವಂತನಿಗೆ ಜೈಕಾರ ಹಾಕಿ ಭಕ್ತಿ ಪರಾಕಾಷ್ಠೆ ಮೆರೆದರು.
ಈ ಸಂದರ್ಭದಲ್ಲಿ ನಡೆದ ವರ್ಣರಂಜಿತ ಮೆರವಣಿಗೆ ಮಂಗಳೂರಿನ ರಸ್ತೆಗಳಲ್ಲಿ ದೃಶ್ಯ ಕಾವ್ಯ ಹರಿದಂತೆ ಭಾಸವಾಯಿತು. ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದಿಂದ ಪ್ರಾರಂಭಗೊಂಡು ಮಹಾಮಾಯ ದೇವಸ್ಥಾನ ರಸ್ತೆ , ಡೊಂಗರಕೇರಿ , ನ್ಯೂ ಚಿತ್ರ ವೃತ್ತ ಮೂಲಕ ರಥಬೀದಿಯಿಂದ ದೇವಳದ ವರೆಗೆ ವಿಜೃಂಭಣೆಯಿಂದ ಈ ಶೋಭಾಯಾತ್ರೆ ಸಾಗಿತು.
ದಿಗ್ವಿಜಯ ಯಾತ್ರೆ ಸಾಗಿದ ದಾರಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ, ತಳಿರು ತೋರಣದ ಶೃಂಗಾರ ಕಣ್ಮನ ಸೆಳೆಯುತ್ತಿತ್ತು. ಈ ಅಲಂಕರದ ನಡುವೆ ಸಾಗಿ ಬಂದ ಭಕ್ತಿಯ ಮೆರವಣಿಗೆಯಲ್ಲಿ, ವೈದಿಕರಿಂದ ವೇದಘೋಷ, ಕೇರಳದ ಪ್ರಸಿದ್ಧ ಚಂಡೆ ವಾದನ, ಮಹಿಳಾ ಮಂಡಳಿಯವರಿಂದ ಭಜನೆ, ವಾದ್ಯ ಘೋಷ ದೊಂದ ಝೇಂಕಾರ ಈ ಕೈಂಕರ್ಯದ ಆಕರ್ಷಣೆಯನ್ನು ಮುಗಿಲೆತ್ತರಕ್ಕೆ ರಾಚುವಂತೆ ಮಾಡಿತು.
ಇದೇ ಸಂದರ್ಭದಲ್ಲಿ ಶ್ರೀಗಳವರಿಂದ ಸಂಸ್ಥಾನದ ಆರಾಧ್ಯ ಶ್ರೀ ವ್ಯಾಸ ರಘುಪತಿ ನರಸಿಂಹ ದೇವರ ದರ್ಶನ ಸಂಪ್ರದಾಯ, ಬಳಿಕ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿಯ ಸನ್ನಿವೇಶ, ಅನಂತರದಲ್ಲಿ ದಿಗ್ವಿಜಯ ಯಾತ್ರೆಯ ಸೊಬಗು ಅನನ್ಯ ಮಹೋತ್ಸವಕ್ಕೆ ಸಾಕ್ಷಿಯಾಯಿತು.
ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯವರಿಂದ ಶ್ರೀ ದೇವಳದ ಹಾಗೂ ಮಂಗಳೂರಿನ ಸಮಾಜ ಭಾಂದವರ ಪರವಾಗಿ ಶ್ರೀ ಗಳವರಿಗೆ ಹಾರಾರ್ಪಣೆ ನೆರವೇರಿದಾಗ ಶ್ರೀಗಳಿಗಾಗಿ ಜೈಕಾರ ಮೊಳಗಿತು.
ನಾಡಿನ ವಿವಿಧೆಡೆಯ ಜಿಯಸ್‌ಬಿ ದೇವಾಲಯಗಳ , ಭಜನಾ ಮಂಡಳಿಗಳ ಹಾಗೂ ಕಾಶಿ ಮಠ ಸಂಸ್ಥಾನದ ಶಾಖಾ ಮಠದ ಪದಾಧಿಕಾರಿಗಳಿಂದ ಗೌರವ ಸಮರ್ಪಣೆಯ ಸೊಗಸಾದ ಸನ್ನಿವೇಶವು ಭಕ್ತ ಸಮೂಹ ಮೂಕವಿಸ್ಮಿತವಾಗಿಸಿತು.
ದೇವಳದ ಮೊಕ್ತೇಸರರಾದ ಸಿ.ಎಲ್.ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್ , ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್, ಜಿಯಸ್‌ಬಿ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಎಂ.ಜಗನ್ನಾಥ್ ಕಾಮತ್, ಕೊಕೊಚ್ಚಿನ್ ತಿರುಮಲ ದೇವಸ್ಥಾನದ ಮೊಕ್ತೇಸರರು ಮತ್ತು ಮುಂಬೈ , ದೆಹಲಿ , ಕೇರಳ ಪ್ರದೇಶದಲ್ಲಿರುವ ದೇವಳಗಳ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಈ ಮಹೋತ್ಸವದಲ್ಲಿ ಭಾಗಿಯಾದರು.