ಕೊಂಬಾರು: ಒಂದು ಕಡೆ ಆನೆ,ಚಿರತೆ, ಮಂಗ,ಕಾಡುಕೋಣ ದಂತಹ ಕಾಡು ಪ್ರಾಣಿಗಳ ಹಾವಳಿ ಇನ್ನೊಂದು ಕಡೆ ಅರಣ್ಯ ರಕ್ಷಣೆಯ ನೀತಿಯನ್ನು ಮುಂದಿಟ್ಟು ನಮಗೆ ಮೂಲ ಭೂತ ಸೌಕರ್ಯಗಳಾದ ರಸ್ತೆ, ಕಿರು ಸೇತುವೆಗಳನ್ನು ಒದಗಿಸದೆ, ದುರಸ್ತಿ ಮಾಡದೆ ಈ ಭಾಗದ ಅಭಿವೃದ್ಧಿಗೆ ತೊಡಕಾಗಿದೆ. ಇದರ ನಡುವೆ ಕಸ್ತೂರಿ ರಂಗನ್ ರಂತಹ ವರದಿಯನ್ನು ಸರಕಾರ ಯಾವಾಗ ಜಾರಿ ಮಾಡುತ್ತಾರೋ ಎನ್ನುವ ತೂಗು ಗತ್ತಿಯ ಭಯದ ನೆರಳಿನಲ್ಲಿ ನಮ್ಮ ಬದುಕು ಸಾಗುತ್ತಿದೆ ಎಂದು ಕೊಂಬಾರು, ಸಿರಿಬಾಗಿಲು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ರವಿವಾರ ರಾತ್ರಿ ಕೊಂಬಾರು ಚೆನ್ನಕೇಶವ ಅವರ ಮನೆಯ ವಠಾರದಲ್ಲಿ ಹಮ್ಮಿಕೊಂಡ ವಾಸ್ತವ್ಯ ಶಿಬಿರದ ಚಾವಡಿ ಚರ್ಚೆಯಲ್ಲಿ ಗ್ರಾಮಸ್ಥರು ತಮ್ಮ ಅಹವಾಲನ್ನು ತೋಡಿಕೊಂಡರು.
ಕೊಂಬಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾದ ಪ್ರಸನ್ನ ಕುಮಾರ್ ಅವರು ಹೇಳುವಂತೆ “ನಮ್ಮ ಹಿರಿಯರು ಹೇಳುವ ಪ್ರಕಾರ 1903ರಲ್ಲಿ ಬ್ರಿಟಿಷ್ ಆಳ್ವಿಕೆಯ ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ ಎರಡು ಬಂಗ್ಲೆಗಳಿತ್ತು.ಆಗ ಬ್ರಿಟಿಷ್ ಅಧಿಕಾರಿಗಳು (ಅವರನ್ನು ದೊರೆಗಳು ಎನ್ನುತ್ತಿದ್ದರು) ಓಡಾಟ ನಡೆಸಲು ಕುದಾರೆ ಗಾಡಿ ಓಡುವ ರಸ್ತೆಗಳನ್ನು ಗುರುತಿಸಿದ್ದರು. ಆ ರಸ್ತೆಗಳು ಇಂದಿಗೂ ನಕ್ಷೆಯಲ್ಲಿವೆ. ಆದರೆ ಬಳಿಕ ಇಲ್ಲಿ ವಾಸ ಮಾಡುತ್ತಿರುವ ಜನರ ಅನುಕೂಲಕ್ಕೆ ಅಗತ್ಯವಾಗಿದ್ದ ರಸ್ತೆ ನಿರ್ಮಾಣಕ್ಕೆ ಸರಕಾರದ ನೀತಿಗಳು ತೊಡಕಾಗಿವೆ. 1984 ರ ನಂತರ ಸುಪ್ರೀಂ ಕೋರ್ಟ್ ನ ತೀರ್ಪು ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ಅರಣ್ಯ ರಕ್ಷಣೆಯ ಹೆಸರಿನಲ್ಲಿ ಅಭಿವೃದ್ಧಿ ಗೆ ತೊಡಕಾಗಿ ಪರಿಗಣಿಸಿದೆ. ಇತ್ತೀಚಿನ ಕಸ್ತೂರಿ ರಂಗನ್ ವರದಿ ಜಾರಿ ಮಾಡಲಾಗುತ್ತದೆ ಎನ್ನುವ ಪ್ರಸ್ತಾಪ ನಮ್ಮನ್ನು ಮತ್ತಷ್ಟು ಆತಂಕಕ್ಕೀಡು ಮಾಡಿತ್ತು. ಆ ವರದಿ ಜಾರಿ ಮಾಡಬಾರದು ಎಂದು ನಾವು ಪಂಚಾಯತ್ ಗಳಲ್ಲಿ ನಿರ್ಣಯ ಮಾಡಿ ಸರಕಾರದ ವಿವಿಧ ಹಂತದ ಅಧಿಕಾರಿಗಳಿಗೆ, ಸಚಿವರಿಗೆ ಸಲ್ಲಿಸಿದ್ದೇವೆ. ನಾವು ಕಾಡಿನ ನಡುವೆ ಬದುಕು ಕಟ್ಟಿಕೊಂಡು ಇದ್ದೇವೆ.ಅರಣ್ಯ ರಕ್ಷಣೆಯ ಕಾನೂನು ಬೇಡ ಎಂದು ನಾವು ಹೇಳುವುದಿಲ್ಲ.ಆದರೆ ನಾವು ವಾಸುತ್ತಿರುವ ಪ್ರದೇಶ ಎಲ್ಲಾ ಪ್ರದೇಶಗಳ ರೀತಿ, ರಸ್ತೆ, ಸೇತುವೆ, ಬಸ್ ಸೌಕರ್ಯ, ನಮ್ಮ ಮಕ್ಕಳಿಗೆ ಶಿಕ್ಷಣ ಪಡೆಯುವ ವ್ಯವಸ್ಥೆ, ಸೂಕ್ತ ಆಸ್ಪತ್ರೆ ಮೊದಲಾದ ಬದುಕಿಗೆ ಬೇಕಾದ ಅಗತ್ಯ ಸೌಲಭ್ಯ ನೀಡುವುದಕ್ಕೆ ಸರಕಾರದ ನೀತಿ ಅಡ್ಡಿಯಾಗಬಾರದು. ಈ ನೀತಿ ರೂಪಿಸುವ ಸಂದರ್ಭದಲ್ಲಿ ನಮ್ಮ ಇರುವಿಕೆಯನ್ನು ಗಮನಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು . ಇಲ್ಲದೆ ಹೋದರೆ ಇನ್ನೂ ಎಷ್ಟೋ ವರ್ಷ ಕಳೆದರೂ ಈ ಗ್ರಾಮದ ಅಭಿವೃದ್ಧಿ ಎನ್ನುವುದು ಮರಿಚಿಕೆಯಾದೀತು ಎಂದು ಕೊಂಬಾರು, ಸಿರಿ ಬಾಗಿಲು ಗ್ರಾಮಗಳ ಅಭಿವೃದ್ಧಿಗೆ ತೊಡಕಾಗಿರುವ ಸಮಸ್ಯೆಗಳನ್ನು ವಿವರಿಸಿದರು.
ಕೊಂಬಾರು ಗ್ರಾಮದ ಚೆನ್ನಪ್ಪ ಗೌಡರು ಮಾತನಾಡಿ, ನನಗೆ ಈಗ 64 ವರ್ಷ ಈ ಗ್ರಾಮದಲ್ಲಿ ಇದ್ದೆ ಶಾಲೆಗೆ ಹೋಗ ಬೇಕಾದರೆ ಮೈಲು ಗಟ್ಟಲೆ ನಡೆದು ಹೋಗಬೇಕಾಗಿತ್ತು. ಈಗಲೂ ಸಮರ್ಪಕ ವಾದ ಬಸ್ ವ್ಯವಸ್ಥೆ ಇಲ್ಲ. ಇಲ್ಲಿ ನ ಮಕ್ಕಳ ಉತ್ತಮ ಶಿಕ್ಷಣ ಪಡೆಯಬೇಕಾದರೆ ಈ ಊರಿನ ಹೊರಗೆ ನಮ್ಮ ಸಂಬಂಧಿಕರ ಮನೆ ಗೆ ಕಳುಹಿಸುತ್ತೇವೆ.ನಮ್ಮ ಬೆಳೆಗಳಿಗೆ ಆನೆ, ಚಿರತೆ, ಕಡವೆ, ಕಾಡು ಹಂದಿ, ಮಂಗಳ ಹಾವಳಿ ಈಗಲೂ ಇದೆ. ನಾನು 1969ರಲ್ಲಿ ಎರಡೂವರೆ ರೂಪಾಯಿ ಸಂಬಳಕ್ಕೆ ಇಲ್ಲಿನ ರೈಲು ನಿಲ್ದಾಣದ ಕೆಲಸ ನಡೆಯುತ್ತಿದ್ದಾಗ ಕೆಲಸಕ್ಕೆ ಹೋಗುತ್ತಿದ್ದೆ. ಆಗ ಒಂದು ರೂಪಾಯಿಗೆ ನಾಲ್ಕು ತೆಂಗಿನ ಕಾಯಿ ದೊರೆಯುತ್ತಿತ್ತು. 45 ರೂಪಾಯಿಗೆ ಒಂದು ಮುಡಿ ಅಕ್ಕಿ ದೊರೆಯುತ್ತಿತ್ತು. ವಾಹನ ಸೌಕರ್ಯ ಇಲ್ಲದ ಕಾರಣ ನಡೆದ ಹೋಗುತ್ತಿದ್ದೆವು. ಕನಿಷ್ಠ ಸಂಬಳ ದಲ್ಲಿ ಬದುಕಿದ್ದೇವೆ. ಆದರೆ ಈಗ ಎಲ್ಲಾ ಕಡೆ ರಸ್ತೆ, ಶಾಲೆ, ಆಸ್ಪತ್ರೆ, ಬಸ್ಸು ಸೌಕರ್ಯ ಇದೆ. ನಮಗೆ ಆ ವ್ಯವಸ್ಥೆ ಗಳಿಲ್ಲ. ಮಳೆಗಾಲದಲ್ಲಿ ನಮ್ಮ ಸಮಸ್ಯೆ ಹೇಳಲಿಕ್ಕೆ ಸಾಧ್ಯವಿಲ್ಲ’ ಎಂದು ತಮ್ಮ ಸಮಸ್ಯೆ ತೋಡಿಕೊಂಡರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಪದಾಧಿಕಾರಿಗಳಾದ ಪುಷ್ಪರಾಜ್ ಬಿ.ಎನ್, ಜಿತೇಂದ್ರ ಕುಂದೇಶ್ವರ, ಸಿದ್ದಿಕ್ ನೀರಾಜೆ, ಲೋಕೇಶ್ ಪೆರ್ಲಂಪಾಡಿ, ಇನೋಳಿ, ಭಾಸ್ಕರ ರೈ ಕಟ್ಟ, ಆರ್.ಸಿ.ಭಟ್, ಹರೀಶ್ ಮೋಟುಕಾನ, ದಯಾ ಕುಕ್ಕಾಜೆ, ರಾಜೇಶ್ ಪೂಜಾರಿ, ಕಡಬ ತಾಲೂಕು ಸಂಘದ ಅಧ್ಯಕ್ಷ ನಾಗರಾಜ್ ಕಡಬ, ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ, ರೋನ್ಸ್ ಬಂಟ್ಚಾಳ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.