ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ದ ಸಮರ ಸಾರಿರುವ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಅಖಾಡಕ್ಕಿಳಿದಿದ್ದಾರೆ.
ಆದಾಯಕ್ಕೂ ಮೀರಿ ಅಧಿಕ ಆಸ್ತಿ ಸಂಪಾದನೆ ಅರೋಪಕ್ಕೆ ಗುರಿಯಾಗಿರುವ ರಾಜ್ಯದ ಹಲವು ಆಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.
ಏಳು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯಾದ ಸುಮಾರು 30 ಕಡೆ ಎಸಿಬಿ ತಂಡಗಳು ಕಾರ್ಯಾಚರಣೆ ಕೈಗೊಂಡಿವೆ.
ಬೆಂಗಳೂರಿನಲ್ಲಿ ಸಹಕಾರ ಸಂಘಗಳ ಜಂಟಿ ನಿಂಬಂಧಕ ಪಾಂಡುರಂಗ ಗರಗ್ ಅವರ ವಿಜಯನಗರದ ಮನೆ, ಜಯನಗರ, ಮಲ್ಲೇಶ್ವರಂ ಕಚೇರಿ ಹಾಗೂ ಚಿತ್ರದುರ್ಗದ ಮನೆಗಳತ್ತ ಎಸಿಬಿ ಅಧಿಕಾರಿಗಳು ಚಿತ್ತ ಹರಿಸಿದ್ದಾರೆ.
ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆಯ ಇಅಧಿಕಾರಿ ದೇವರಾಜ್ ಶಿಗ್ಗಾಂವಿ ಎಂಬವರ ಬಗ್ಗೆಯೂ ತನಿಖೆ ಕೈಗೊಂಡಿರುವ ಮತ್ತೊಂದು ತಂಡ, ಅವರ ಹಾಗೂ ಸಂಬಂಧಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಚಿತ್ರದುರ್ಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಎಂಬವರ ವಿರುದ್ಧವೂ ತನಿಖೆ ನಡೆಸುತ್ತಿರುವ ಎಸಿಬಿಯ ಇನ್ನೊಂದು ತಂಡ, ಮನೆ, ಕಚೇರಿಗಳಿಗೆ ಲಗ್ಗೆ ಹಾಕಿ ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದೆ.
ಕೋಲಾರದ ಅಧಿಕಾರಿಯೊಬ್ಬರ ನಿವಾಸ ಕಚೇರಿ ಸಹಿತ ಆರು ಕಡೆ ದಾಳಿ ನಡೆದಿದೆ. ಬಳ್ಳಾರಿ, ಧಾರವಾಡ, ದಕ್ಷಿಣಕನ್ನಡ, ಹಾಗೂ ಕಲಬುರ್ಗಿಯ ವಿವಿಧೆಡೆ ಕೂಡಾ ಈ ದಾಳಿ ನಡೆದಿದೆ ಎಂದಿ ಎಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.