ಬೆಂಗಳೂರು: ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುವ 2021ನೇ ಸಾಲಿನ ಮಾಸ್ತಿ ಪ್ರಶಸ್ತಿ ಪ್ರಕಟಗೊಂಡಿದ್ದು, ಕವಿ ಜಯಂತ ಕಾಯ್ಕಿಣಿ ಸೇರಿದಂತೆ ಎಂಟು ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿನ ಸಾಧನೆಯನ್ನು ಪರಿಗಣಿಸಿ, ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ನೇತೃತ್ವದಲ್ಲಿ ಈ ಆಯ್ಕೆ ನಡೆಸಲಾಗಿದೆ.
ಪುರಸ್ಕೃತರ ವಿವರ:
ಬಿ.ಎ. ವಿವೇಕ ರೈ- ಜಾನಪದ, ಜಯಂತ ಕಾಯ್ಕಿಣಿ- ಕಾವ್ಯ, ಮಾಧವ ಕುಲಕರ್ಣಿ- ವಿಮರ್ಶೆ, ಕಥೆಗಾರ ಆರ್. ವಿಜಯರಾಘವನ್- ಕಾವ್ಯ, ಎಂ.ಎಸ್. ಆಶಾದೇವಿ- ವಿಮರ್ಶೆ, ಲೇಖಕಿ ವಸುಮತಿ ಉಡುಪ- ಸೃಜನಶೀಲ ಮತ್ತು ಎಚ್.ಎಲ್. ಪುಷ್ಪಾ- ಕಾವ್ಯ ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಾಸ್ತಿ ಟ್ರಸ್ಟ್ ತಿಳಿಸಿದೆ.
ಪ್ರಶಸ್ತಿಯು ತಲಾ 25 ಸಾವಿರ ರೂ ನಗದು, ಮಾಸ್ತಿ ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿದೆ. ಪ್ರೊ.ಎಂ.ಎಚ್. ಕೃಷ್ಣಯ್ಯ, ಜಿ.ಎನ್. ರಂಗನಾಥರಾವ್, ಬಿ.ಆರ್. ಲಕ್ಷ್ಮಣರಾವ್, ಕೃಷ್ಣಮೂರ್ತಿ ಹನೂರು, ಉಷಾ ಕೇಸರಿ ಹಾಗೂ ಡಿ.ಎಂ. ರವಿಕುಮಾರ್ ಆಯ್ಕೆ ಸಮಿತಿಯಲ್ಲಿ ಇದ್ದರು ಎಂದು ಮಾಹಿತಿ ನೀಡಿದೆ.
ನವೆಂಬರ್ 6 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..