ಮಣಿಪಾಲ: ಸಾವಿನಲ್ಲೂ ಮಾನವೀಯತೆ ಮೆರೆದ ಪ್ರಸಂಗಕ್ಕೆ ಮಣಿಪಾಲ ಸಾಕ್ಷಿಯಾಗಿದ್ದು, ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಉಡುಪಿ ಸಮೀಪದ ಕೆಮ್ಮಣ್ಣು ನಿವಾಸಿ 46 ವರ್ಷದ ಜೋ ವಿಕ್ಟರ್ ಲೂಯಿಸ್ ಅವರು ಇತ್ತೀಚೆಗೆ ರಸ್ತೆ ಅಪಘಾತಕ್ಕೊಳಗಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಲೂಯಿಸ್ ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಿಯ ಗೊಂಡ ಕಾರಣ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸದಿದ್ದಾಗ ಅಂಗಾಂಗ ಕಸಿ ಮಾಡಿಸುವ ಕುರಿತು ಕುಟುಂಬದವರು ಸಲಹೆ ಮಾಡಿದ್ದಾರೆ..
ಅದರಂತೆ, ಯಕೃತ್ತನ್ನು ಮಂಗಳೂರು ಅಂಬೇಡ್ಕರ್ ಸರ್ಕಲ್‌ನ ಕೆಎಂಸಿ ಆಸ್ಪತ್ರೆಗೆ ಹಾಗೂ ಕಿಡ್ನಿಗಳನ್ನು ಮಂಗಳೂರಿನ ಯೇನಪೊಯ ಮತ್ತು ಇಂಡಿಯಾನಾ ಆಸ್ಪತ್ರೆಗಳಿಗೆ ಕಳುಹಿಸಲಾಯಿತು. ಇದೇ ವೇಳೆ, 2 ಕಾರ್ನಿಯಾ ಮತ್ತು ಚರ್ಮವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.






















































