ಬೆಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತ ಅಧಿಕಾರ ನೀಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ ಕೊಲೆಗಡುಕರ ಪತ್ತೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಎನ್.ಐ.ಎ ಗೆ ಪ್ರಕರಣ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ತಾಂತ್ರಿಕ ಹಾಗೂ ಕಾಗದ ಪತ್ರಗಳ ಕೆಲಸ ಜಾರಿಯಲ್ಲಿದೆ. ಆದಷ್ಟು ಬೇಗನೆ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರ ಮಾಡಲಾಗುವುದು ಎಂದರು. ಅನೌಪಚಾರಿಕವಾಗಿ ಎನ್.ಐ.ಎ ಗೆ ಈಗಾಗಲೇ ತಿಳಿಸಲಾಗಿದೆ. ಕೇರಳ ಮತ್ತು ಮಂಗಳೂರಿನಲ್ಲಿ ಪ್ರಾಥಮಿಕ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕರಾವಳಿಯಲ್ಲಿ ಹತ್ಯೆಗೀಡಾದ ಮಸೂದ್ ಹಾಗೂ ಫಾಜಿಲ್ ಮನೆಗಳಿಗೂ ಮುಂದಿನ ದಿನಗಳಲ್ಲಿ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.







































































