ದಾವಣಗೆರೆ: ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯತೆಯೇ ನಮ್ಮ ನಿಲುವು. ಯಾರಿಗೂ ಬೇಧ-ಭಾವ ಮಾಡುವ ಪ್ರಶ್ನೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಾವಣಗೆರೆಯ ಜಿಎಂಐಟಿ ಹಲಿಪ್ಯಾಡ್ ನಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಅವರ ಕಾಲದಲ್ಲಿ ಏನೇನು ಮಾಡಿದ್ದಾರೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ ಕಡಿಮೆಯಾಗಿದೆ. ನಾವು ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವುದರಿಂದ ಎಲ್ಲರಿಗೂ ಕೂಡ ವಿಶ್ವಾಸ ಬಂದಿದೆ. ಖಂಡಿತವಾಗಿಯೂ ನಮ್ಮ ಪೊಲೀಸರು ಯಾರು ಕೊಲೆಗಡುಕರಿದ್ದಾರೆ ಅವರನ್ನು ಪತ್ತೆ ಹಚ್ಚುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಗೃಹ ಸಚಿವರ ಮನೆಗೆ ಭದ್ರತೆ ಸಮಸ್ಯೆಯಿಲ್ಲ. ಪ್ರತಿಭಟನಾಕಾರರು ಬಂದ ಸಂದರ್ಭದಲ್ಲಿ ಭದ್ರತೆಯ ಸಮಯದಲ್ಲಿ ಯಾರು ಇರಬೇಕಿತ್ತೋ ಅವರು ಇರಲಿಲ್ಲ. ಅವರಿಗೆ ತಾಕೀತು ಮಾಡಿ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.ಈ ಕುರಿತು ನಾಳೆ ಸಭೆ ನಡೆಯಲಿದೆ. ವಿಶೇಷವಾಗಿ ಪ್ರಯಾಣಿಕರ ತಪಸಾಣೆ ಮತ್ತು ಬೇರೆ ಬೇರೆ ಕ್ರಮಗಳ ಬಗ್ಗೆ ಮಂಗಳವಾರ ಮಹತ್ವದ ಸಭೆಯನ್ನು ಆರೋಗ್ಯ ಸಚಿವರ ಜತೆಗೆ ಮಾಡುತ್ತೇವೆ. ಮಂಕಿಪಾಕ್ಸ್ ಬಗ್ಗೆ ಕೆಲವು ನಿರ್ದೇಶನ ಮತ್ತು ಔಷಧಿ ವ್ಯವಸ್ಥೆಗಳ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.







































































