ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿದ್ದು, ಹೊಸ ಸರ್ಕಾರವು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಾಕ್ ಅವರನ್ನು ಜನರಲ್ ಝಡ್ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದೆ.
ಹೊಸ ಪ್ರಧಾನಿ ಬಾಲೇಂದ್ರ ಶಾ ನೇತೃತ್ವದ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ, ಈ ಪ್ರಕರಣದ ತನಿಖೆಗೆ ರಚಿಸಲಾದ ಉನ್ನತ ಮಟ್ಟದ ಆಯೋಗದ ವರದಿಯನ್ನು ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾಗಿದೆ.
ಆಯೋಗವು ಓಲಿ, ಲೇಖಾಕ್ ಹಾಗೂ ಮಾಜಿ ಪೊಲೀಸ್ ಮುಖ್ಯಸ್ಥ ಚಂದ್ರ ಕುಬೇರ್ ಖಪುಂಗ್ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಲು ಶಿಫಾರಸು ಮಾಡಿತ್ತು. ಈ ಹಿನ್ನೆಲೆ, ನ್ಯಾಯಾಲಯದ ಬಂಧನ ವಾರಂಟ್ ಆಧಾರದ ಮೇಲೆ ಶನಿವಾರ ಮುಂಜಾನೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓಲಿಯನ್ನು ಭಕ್ತಪುರದ ಗುಂಡುವಿನ ನಿವಾಸದಿಂದ ಹಾಗೂ ಲೇಖಕ್ ಅವರನ್ನು ಸೂರ್ಯಬಿನಾಯಕ್‌ನ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕ ರಜಾದಿನ ಇರುವುದರಿಂದ ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗುತ್ತದೆ.
ತನಿಖಾ ಆಯೋಗದ ವರದಿ ಪ್ರಕಾರ, ರಾಷ್ಟ್ರೀಯ ದಂಡ ಸಂಹಿತೆಯ ಸೆಕ್ಷನ್ 181 ಮತ್ತು 182 ಅಡಿಯಲ್ಲಿ ಆರೋಪ ಸಾಬೀತಾದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಬಂಧನದ ನಂತರ ಪ್ರತಿಕ್ರಿಯಿಸಿದ ಓಲಿ, “ಇದು ರಾಜಕೀಯ ಪ್ರತೀಕಾರ. ನಾನು ಕಾನೂನುಬದ್ಧವಾಗಿ ಹೋರಾಟ ನಡೆಸುತ್ತೇನೆ” ಎಂದು ಹೇಳಿದ್ದಾರೆ. ಇದೇ ವೇಳೆ ಲೇಖಕ್ ಕೂಡ ತಮ್ಮ ಬಂಧನವನ್ನು ರಾಜಕೀಯವಾಗಿ ಪ್ರೇರಿತ ಕ್ರಮವೆಂದು ಆರೋಪಿಸಿದ್ದಾರೆ.
ಆದರೆ ಹೊಸ ಗೃಹ ಸಚಿವ ಸುಧನ್ ಗುರುಂಗ್, ಈ ಕ್ರಮ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿ, “ಪ್ರತಿಭಟನೆಗಳ ವೇಳೆ ನಡೆದ ಘಟನೆಗಳಿಗೆ ಜವಾಬ್ದಾರರನ್ನ ನ್ಯಾಯದ ಮುಂದೆ ತರುವುದು ನಮ್ಮ ಉದ್ದೇಶ” ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆ ನೇಪಾಳದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳು ಹೇಗಿರುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.




























































