ನಾಳೆ ಉತ್ತರ ಕರ್ನಾಟಕ ಸ್ಥಬ್ಧವಾಗಲಿದೆ. ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಲು ಹೊರಟಿರೋ ಸಿಎಎ ಕಾಯ್ದೆಯನ್ನು ವಿರೋಧಿಸಿ ಉತ್ತರ ಕರ್ನಾಟಕದ ಆರು ಜಿಲ್ಲೆಯ ಲಕ್ಷಾಂತರ ಮಂದಿ ಬೀದಿಗಿಳಿಯಲಿದ್ದಾರೆ. ಎನ್‍ಪಿಆರ್, ಎನ್‍ಆರ್‍ಐಸಿ ಜಾರಿ ದೇಶಕ್ಕೆ ಮಾರಕ ಅನ್ನೋದನ್ನ ಸಾರಲು ಉತ್ತರ ಕರ್ನಾಟಕದ ಪ್ರಮುಖ ನಾಯಕರು ನಾಳೆ ಕಲ್ಬುರ್ಗಿಯ ರಿಂಗ್ ರಸ್ತೆಯ ಪೀರ್ ಬಂಗಾಲಿ ಮೈದಾನದಲ್ಲಿ ಮೂರು ಗಂಟೆಗೆ ಜನತಾ ವೇದಿಕೆಯಡಿಯಲ್ಲಿ ಸೇರಲಿದ್ದಾರೆ.
ಬಿಜೆಪಿ ಸರ್ಕಾರದ ಜನತಾ ವಿರೋಧಿ ಧೋರಣೆಯನ್ನು ಖಂಡಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ, ಜೆಡಿಎಸ್ ನಾಯಕ ನಾಸಿರ್ ಹುಸೇನ್ ಉಸ್ತಾದ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಡಿಎಂಕೆ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಸ್ಟಾಲಿನ್, ದೆಹಲಿಯ ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ಅನ್ಜಾಜ್ ಮುಂತಾದ ಪ್ರಮುಖ ನಾಯಕರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ನಡೆಯುವ ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲ್ಬುರ್ಗಿ ಸುತ್ತಮುತ್ತ ಪೋಲಿಸರು ಬಿಗಿ ಭದ್ರತೆಯನ್ನು ಕಲ್ಪಿಸಿದ್ದಾರೆ.
© 2020 Udaya News – Powered by RajasDigital.