ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆ ಬಗ್ಗೆ ಸಿಎಂ ಆಪ್ತರು ಗರಂ ಆಗಿದ್ದಾರೆ. ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ ಆಪ್ತ ಶಾಸಕ ಎಂ.ಪಿ. ರೇಣುಕಾಚಾರ್ಯ, ‘ಯತ್ನಾಳ್‌ಗೆ ತಾಕತ್ತಿದ್ದರೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ, ಹೊನ್ನಾಳಿ ತಾಲೂಕಿನ ಹೊಳೆಹರಳಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪನವರು. ಈ ಯಡಿಯೂರಪ್ಪನವರನ್ನ ಸಿಎಂ ಮಾಡಿದ್ದು ನೀನಾ ಎಂದು ಯತ್ನಾಳ್ ಅವರನ್ನು ಪ್ರಶ್ನಿಸಿದರು.
ಯಡಿಯೂರಪ್ಪನವರು ನಿಮ್ಮನ್ನ ಶಾಸಕರನ್ನಾಗಿ ಮಾಡಿದ್ದಕ್ಕೇ ಇದೇನಾ ನಿಮ್ಮ ಕೊಡುಗೆ ಎಂದು ಯತ್ನಾಳ್ ಅವರನ್ನು ಪ್ರಶ್ನೆ ಮಾಡಿದ ಅವರು, ಯತ್ನಾಳ್ ಅವರು ಮಾನಸೀಕರ ಸ್ಥಿತಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ನಮ್ಮ ಸಿಎಂ. ತಾಕತ್ತಿದ್ದರೆ ನೀವು ನಿಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಚುನಾವಣೆಗೆ ಎದುರಿಸಿ. ನಿನಗೆ ಜನ ಸರಿಯಾದ ಉತ್ತರ ಕೊಡುತ್ತಾರೆ ಎಂದ ರೇಣುಕಾಚಾರ್ಯ, ಸೋಮವಾರ ಎಲ್ಲಾ ಶಾಸಕರು ಸೇರಿ ಯತ್ನಾಳ್ ಅವರಿಗೆ ಸರಿಯಾದ ಉತ್ತರ ಕೊಡ್ತೀವಿ ಎಂದು ತಿಳಿಸಿದರು.
‘ನೀನು ಮಗನನ್ನು ಇಟ್ಟುಕೊಂಡು ಕೆಲಸ ಮಾಡುತ್ತೀಯಲ್ಲಾ ನೀನು ಭ್ರಷ್ಟ ಎಂದು ಯತ್ನಾಳ್ ವಿರುದ್ದ ವಾಕ್ಪ್ರಹಾರ ಮಾಡಿದ ರೇಣುಕಾಚಾರ್ಯ, ‘ನೀನು ಒರಿಜಿನಲ್ ಬಿಜೆಪಿ ನಾ’ ಎಂದು ಸಾಲು ಸಾಲು ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು.
‘ನಿನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಾಗ ಪಕ್ಷಕ್ಕೆ ಕರೆ ತಂದವರು ಯಡಿಯೂರಪ್ಪನವರು ಎಂದು ಯತ್ನಾಳ್ ಅವರನ್ನು ಕೆಣಕಿದ ರೇಣುಕಾಚಾರ್ಯ, ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪಚುನಾವಣೆಯ ವೇಳೆಯಲ್ಲಿ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಿದ್ದೀರಿ’ ಎಂದು ಗದರಿಸಿದರಲ್ಲದೆ, ‘ನಿಮ್ಮ ಹೇಳಿಕೆಯಿಂದೆ ಕಾಂಗ್ರೇಸ್ ನವರ ಪಿತೂರಿ ಇದೆ’ ಎಂದೂ ಆರೋಪಿಸಿದರು.