ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗ್ತಾರ? ಯಡಿಯೂರಪ್ಪ ಸ್ಥಾನಕ್ಕೆ ಕಟ್ಟರ್ ಹಿಂದೂವಾದಿಯ ಹೆಸರಿನತ್ತ ಬಿಜೆಪಿ ಹೈಕಮಾಂಡ್ ಚಿತ್ತ ಹರಿಸಿದ್ದಾರ? ಕಮಲ ಪಾಳಯದಲ್ಲಿ ಬಿಎಸ್‌ವೈ ಪರ-ವಿರೋಧಿಗಳ ಕಲಹಕ್ಕೆ ಬೀಳುತ್ತಾ ಬ್ರೇಕ್..?
ಬೆಂಗಳೂರು: ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿಯಲ್ಲೀಗ ದಿನಕ್ಕೊಂದು ವಿದ್ಯಮಾನಗಳು ಗರಿಗೆದರುತ್ತಿವೆ. ಅದರಲ್ಲೂ ನಾಯಕತ್ವ ಬದಲಾವಣೆಯ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದು ಇದೀಗ ಆ ಸುದ್ದಿಗಳಿಗೂ ರೋಚಕತೆ ಬಂದಿದೆ.
ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅವಕಾಶಗಳಿಲ್ಲ. ಹಾಗಾಗಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ಪುನರುಚ್ಚರಿಸುತ್ತಲೇ ಇದ್ದಾರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಹಲವಾರು ದಿನಗಳಿಂದ ಯಡಿಯೂರಪ್ಪ ನಾಯಕತ್ವದ ಬಗ್ಗೆ ಹೇಳಿಕೆಗಳನ್ನು ಕೊಡುತ್ತಲೇ ಬಿಎಸ್‌ವೈ ಆಪ್ತರ ಕೆಂಗಣ್ಣಿಗೆ ಗುರಿಯಾಗಿರುವ ಕೇಸರಿ ಪಾಳಯದ ಫೈರ್ ಬ್ರಾಂಡ್ ಯತ್ನಾಳ್, ವರಿಷ್ಠರ ಎಚ್ಚರಿಕೆಯ ನಡುವೆಯೂ ಹೇಳಿಕೆಗಳನ್ನು ಮುಂದುವರುಸುತ್ತಲೇ ಇದ್ದಾರೆ. ವಿಜಯಪುರದಲ್ಲಿ ಮತ್ತೊಮ್ಮೆ ಹೇಳಿಕೆ ನೀಡಿರುವ ಯತ್ನಾಳ್, ಸಿಎಂ ಬದಲಾವಣೆ ಖಚಿತ, ಮುಂಬರುವ ವಿಧಾನಸಭಾ ಚುನಾವಣೆಯು ಬಿಎಸ್‌ವೈ ನೇತೃತ್ವದಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಯತ್ನಾಳ್ ಅವರ ಹೇಳಿಕೆ ಬಹಳಷ್ಟು ಗಂಭೀರವಾಗಿದ್ದರೂ ಶಿಸ್ತಿನ ಪಕ್ಷ ಎಂದೇ ಗುರುತಿಸಿಕೊಂಡಿರುವ ಬಿಜೆಪಿ ಧುರೀಣರು ಸೂಕ್ತ ಪ್ರತಿಕ್ರಿಯೆ ನೀಡುತ್ತಿಲ್ಲ. ‘ಯತ್ನಾಳ್ ಹೇಳಿಕೆಗೆ ಮಹತ್ವವಿಲ್ಲ’ ಎಂದಷ್ಟೇ ಸ್ಪಷ್ಟನೆ ನೀಡುತ್ತಿರುವ ವರಿಷ್ಟರು, ಸಿಎಂ ಬದಲಾವಣೆ ಇಲ್ಲ ಎಂಬುದಾಗಿ ಎಲ್ಲೂ ಸ್ಪಷ್ಟನೆ ನೀಡುತ್ತಿಲ್ಲ ಹಾಗಾಗಿಯೇ ಕಮಲ ಕಾರ್ಯಕರ್ತರೇ ಸದ್ಯದ ಪರಿಸ್ಥಿತಿ ಬಗ್ಗೆ ಗೊಂದಲದಲ್ಲಿದ್ದಾರೆ.
ಬಿಎಸ್‌ವೈ ಆಪ್ತರಿಂದ ಪ್ರತಿ ತಂತ್ರ:
ಯತ್ನಾಳ್ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರು ಗರಂ ಆಗಿದ್ದಾರೆ. ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ ಆಪ್ತ ಶಾಸಕ ಎಂ.ಪಿ. ರೇಣುಕಾಚಾರ್ಯ, ‘ಯತ್ನಾಳ್‌ಗೆ ತಾಕತ್ತಿದ್ದರೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ, ಹೊನ್ನಾಳಿ ತಾಲೂಕಿನ ಹೊಳೆಹರಳಹಳ್ಳಿ ಗ್ರಾಮದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪನವರು. ಈ ಯಡಿಯೂರಪ್ಪನವರನ್ನ ಸಿಎಂ ಮಾಡಿದ್ದು ನೀನಾ ಎಂದು ಯತ್ನಾಳ್ ಅವರನ್ನು ಪ್ರಶ್ನಿಸಿದರು.
‘ನೀನು ಮಗನನ್ನು ಇಟ್ಟುಕೊಂಡು ಕೆಲಸ ಮಾಡುತ್ತೀಯಲ್ಲಾ ನೀನು ಭ್ರಷ್ಟ’ ಎಂದು ಯತ್ನಾಳ್ ವಿರುದ್ದ ವಾಕ್ಪ್ರಹಾರ ಮಾಡಿದ ರೇಣುಕಾಚಾರ್ಯ, ‘ನೀನು ಒರಿಜಿನಲ್ ಬಿಜೆಪಿ ನಾ’ ಎಂದು ಸಾಲು ಸಾಲು ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು.
‘ನಿನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಾಗ ಪಕ್ಷಕ್ಕೆ ಕರೆ ತಂದವರು ಯಡಿಯೂರಪ್ಪನವರು’ ಎಂದು ಯತ್ನಾಳ್ ಅವರನ್ನು ಕೆಣಕಿದ ರೇಣುಕಾಚಾರ್ಯ, ‘ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪಚುನಾವಣೆಯ ವೇಳೆಯಲ್ಲಿ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಿದ್ದೀರಿ’ ಎಂದು ಗದರಿಸಿದರಲ್ಲದೆ, ‘ನಿಮ್ಮ ಹೇಳಿಕೆಯ ಹಿಂದೆ ಕಾಂಗ್ರೇಸ್‌ನವರ ಪಿತೂರಿ ಇದೆ’ ಎಂದೂ ಆರೋಪಿಸಿದರು.
ಯಡಿಯೂರಪ್ಪನವರು ನಿಮ್ಮನ್ನ ಶಾಸಕರನ್ನಾಗಿ ಮಾಡಿದ್ದಕ್ಕೇ ಇದೇನಾ ನಿಮ್ಮ ಕೊಡುಗೆ?’ ಎಂದು ಯತ್ನಾಳ್ ಅವರನ್ನು ಪ್ರಶ್ನೆ ಮಾಡಿದ ಅವರು, ಯತ್ನಾಳ್ ಅವರು ಮಾನಸೀಕರ ಸ್ಥಿತಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. ‘ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ನಮ್ಮ ಸಿಎಂ. ತಾಕತ್ತಿದ್ದರೆ ನೀವು ನಿಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಚುನಾವಣೆಗೆ ಎದುರಿಸಿ. ಜನ ಸರಿಯಾದ ಉತ್ತರ ಕೊಡುತ್ತಾರೆ’ ಎಂದ ರೇಣುಕಾಚಾರ್ಯ, ಸೋಮವಾರ ಎಲ್ಲಾ ಶಾಸಕರು ಸೇರಿ ಯತ್ನಾಳ್ ಅವರಿಗೆ ಸರಿಯಾದ ಉತ್ತರ ಕೊಡ್ತೀವಿ ಎಂದು ತಿಳಿಸಿದರು.