ಬೆಂಗಳೂರು: ಯಕ್ಷಗಾನ ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಈ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಮಹಿಳೆಯರೂ ಹಂತಹಂತವಾಗಿ ಪಾಲ್ಗೊಂಡು ಪುರುಷರಂತೆಯೇ ಸಾಧನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ. ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.
ಸ್ವತಃ “ಶರಸೇತು ಬಂಧ” ಎಂಬ ಮಹಿಳಾ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಆಂಜನೇಯನ ಪಾತ್ರವಹಿಸಿ ಅರ್ಥಗಾರಿಕೆ ಮಾಡಿದ ಧರಣೀದೇವಿ ಅವರು, ಭಾಗವತಿಕೆಯಲ್ಲಿ, ಚೆಂಡೆ ವಾದನದಲ್ಲಿ, ಮುಮ್ಮೇಳ ಕಲಾವಿದರಾಗಿ ಬಹಳ ಹಿಂದಿನಿಂದಲೂ ಮಹಿಳೆಯರು ಅವರದೇ ಛಾಪು ಮೂಡಿಸಿದ್ದಾರೆ. ಬಣ್ಣದ ವೇಷದಲ್ಲೂ ತೊಡಗಿಸಿಕೊಂಡು, ಆಯಾ ಪಾತ್ರಕ್ಕೆ ಅನುಗುಣವಾದ ಧ್ವನಿಯನ್ನೂ ನೀಡಿ ಪಾತ್ರಕ್ಕೆ ನ್ಯಾಯ ಒದಗಿಸಿದ ನಿದರ್ಶನಗಳು ಇವೆ ಎಂದು ಹೇಳಿದರು.
ಶರಸೇತು ಬಂಧ ತಾಳಮದ್ದಲೆಯಲ್ಲಿ ಭಾಗವಹಿಸಿದ ಅವರು, ಹನುಮಂತನ ತನ್ನ ಪಾತ್ರ ಪರಿಚಯ ಮಾಡುತ್ತಾ, ವಾಯುಪುತ್ರ, ರಾಮಭಕ್ತ ಎಂಬ ಹೆಸರುಗಳಿವೆ. ಆದರೆ ತಾನು ತನ್ನ ತಾಯಿಯ ಹೆಸರಿನಿಂದಲೂ ಗುರುತಿಸಿಕೊಂಡು ಅಂಜನಾ ಸುತ ಅಥವಾ ಆಂಜನೇಯ ಎಂದೂ ಹೆಸರಿದೆ ಎಂದು ಹೇಳುವ ಮೂಲಕ ತನ್ನ ಕರಾವಳಿಯ ತಾಯಿಯ ಕುಟುಂಬದ ಆಧಾರಿತ ಅಳಿಯಕಟ್ಟು ಸಂಪ್ರದಾಯವನ್ನು ಪರೋಕ್ಷವಾಗಿ ನೆನಪಿಸಿದರು.
ಯಕ್ಷಗಾನ ಉತ್ಸವ 2024
ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಸಂಸ್ಥೆಯ ವತಿಯಿಂದ ‘ಯಕ್ಷಗಾನ ಉತ್ಸವ-2024’ ಗುರುಗಳಾದ ಶ್ರೀನಿವಾಸ ಸಾಸ್ತಾನ ಮತ್ತು ಕೆ. ಗೌರಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಯಕ್ಷಗಾನ ವೇಷಭೂಷಣ ಹಾಗೂ ಮುಖವರ್ಣಿಕೆ ಕಮ್ಮಟ ಕಾರ್ಯಕ್ರಮವನ್ನು ‘ತುಳುವರೆಂಕುಲು’ ಕಾರ್ಯದರ್ಶಿ, ಮಟ್ಟಿ ರಾಮಚಂದ್ರ ರಾವ್ ಉದ್ಘಾಟಿಸಿದರು. ಅತಿಥಿಗಳಾಗಿ ಖ್ಯಾತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಆಚಾರ್, ಶಂಕರ್ ಹೊಸೂರು, ಉಮೇಶ್ ರಾಜ್, ಸಂಸ್ಥೆಯ ಯಕ್ಷಗಾನ ಗುರು ಮತ್ತು ನಿರ್ದೇಶಕರು ಕೆ. ಗೌರಿ ಉಪಸ್ಥಿತರಿದ್ದರು.
ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ || ಧರಣೀ ದೇವಿ ಮಾಲಗಿತ್ತಿ, ಅಶ್ವಿನಿ ಆಚಾರ್, ಸಾವಿತ್ರಿ ಶಾಸ್ತ್ರಿ ಇವರ ಅರ್ಥಗಾರಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ- ಶರಸೇತು ಬಂಧ ನಡೆಯಿತು. ತಾಳಮದ್ದಳೆಯಲ್ಲಿ ಹಿಮ್ಮೇಳ ಕಲಾವಿದರಾಗಿ ಕುಮಾರಿ ಅನರ್ಘ್ಯ ಟಿ.ಪಿ, ಪೃಥ್ವಿ ಬಡೆಕ್ಕಿಲ, ಶಿಖಿನ್ ಶರ್ಮ ಭಾಗವಹಿಸಿದರು.