ಬೆಂಗಳೂರು: ನಡೆದಾಡುವ ನಿಘಂಟು, ಶಬ್ದ ಬ್ರಹ್ಮ ಎಂದು ಪ್ರಖ್ಯಾತರಾಗಿದ್ದ, ಕನ್ನಡ ಭಾಷೆಯ ಏಳಿಗೆಗಾಗಿ ದುಡಿದ ಮಹನೀಯರಲ್ಲಿ ಪ್ರಮುಖರಾದ, ಶತಾಯುಷಿ, ನಾಡೋಜ ಪ್ರೊ. ಜಿ ವೆಂಕಟಸುಬ್ಬಯ್ಯನವರ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಂಬನಿ ಮಿಡಿದಿದ್ದಾರೆ.
ಹಿರಿಯರು, ಮಾರ್ಗದರ್ಶಕರು ಆದ ಪ್ರೊ. ಜಿ ವೆಂಕಟಸುಬ್ಬಯ್ಯನವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಭಾಷಾ ಶಾಸ್ತ್ರ, ಸಂಶೋಧನೆ, ಅನುವಾದ ಮತ್ತಿನ್ನಿತರ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಗಲುವಿಕೆಯಿಂದ ಕನ್ನಡ ಸಾರಸ್ವತ ಲೋಕದಲ್ಲೊಂದು ಶೂನ್ಯ ಸೃಷ್ಟಿಯಾಗಿದೆ ಎಂದು ಸಿ.ಟಿ.ರವಿ ದುಃಖ ಹಂಚಿಕೊಂಡಿದ್ದಾರೆ.
ಪ್ರೊ. ಜಿ ವೆಂಕಟಸುಬ್ಬಯ್ಯನವರು ಇಹಕಾಯವನ್ನು ತ್ಯಜಿಸಿದರೂ ಅವರ ಬರವಣಿಗೆಯ ಮೂಲಕ, ಕನ್ನಡ ಭಾಷೆಗೆ ಅವರು ನೀಡಿದ ಕೊಡುಗೆಗಳ ಮೂಲಕ ನಮ್ಮೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಅಗಲಿದ ಅವರಾತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂಬ ಪ್ರಾರ್ಥನೆ ನಮ್ಮೆಲ್ಲರದಾಗಲಿ ಎಂದು ಅವರು ಶೋಕ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.