ಬೆಂಗಳೂರು: ಅತ್ಯುತ್ತಮ ಸೇವೆಗೆ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಇತರ ರಾಜ್ಯಗಳ ಸಾರಿಗೆ ನಿಗಮಗಳಿಗೆ ಮಾದರಿಯಂತಿದೆ. KSRTC ಕಚೇರಿಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ಭೇಟಿ,ನೀಡಿದ ಬೆಳವಣಿಗೆ ಕುತೂಹಲದ ಕೇಂದ್ರಬಿಂದುವಾಯಿತು.
22.05.2024 ಮತ್ತು 23.05.2024 ರಂದು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡವು ಕೆ.ಎಸ್.ಆರ್.ಟಿ.ಸಿ.ಯಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಎರಡು ದಿನಗಳ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್‌ನಿಲ್ದಾಣ ಹಾಗೂ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನಿಯಂತ್ರಣ ಕೊಠಡಿಯ ಕಾರ್ಯ ನಿರ್ವಹಣೆ ಹಾಗೂ ಬಸ್ಸುಗಳ ಕಾರ್ಯಾಚರಣೆಯನ್ನು ಪರಿಶೀಲಿಸಿದೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ಇ.ವಿ. ಪವರ್ ಚಾರ್ಜಿಂಗ್ ಕೇಂದ್ರವನ್ನು ಪರಿಶೀಲಿಸಿದ ಅಧಿಕಾರಿಗಳು ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಹಾಗೂ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿಯನ್ನು ಪಡೆದರು.
ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಂಡಕ್ಕೆ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರಾದ (ಸಿಬ್ಬಂದಿ ಮತ್ತು ಜಾಗೃತೆ) ಡಾ.ನಂದಿನಿದೇವಿ ಕೆ. ಅವರು ಪ್ರಾತ್ಯಕ್ಷಿಕೆ ನೀಡಿ, ನಿಗಮದ ವಾಹನಗಳ ತಾಂತ್ರಿಕ ನಿರ್ವಹಣೆ ಮತ್ತು ಕಾರ್ಯಾಚರಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಬಸ್ ನಿಲ್ದಾಣ/ ಘಟಕಗಳ ಕಾಮಗಾರಿ ಪದ್ಧತಿ, ಬಸ್ಸುಗಳ ಬ್ರ್ಯಾಂಡಿಂಗ್, ಬಸ್ಸುಗಳ ಪುನಶ್ವೇತನ ಕಾರ್ಯ, ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.
ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್ ಹಾಗೂ ಅಶ್ವಮೇಧ ವಾಹನಗಳ ಬ್ರ್ಯಾಂಡಿಗ್ ಕಾರ್ಯವನ್ನು ಬಹುವಾಗಿ ಮೆಚ್ಚಿದರು. ನಿಗಮದ ಎಲ್ಲಾ ಮಾದರಿಯ ವಾಹನಗಳನ್ನು ಹಾಗೂ ಕಾರ್ಗೋ ವಾಹನಗಳನ್ನು ಪರಿಶೀಲಿಸಿ ಸೂಕ್ತ ಮಾಹಿತಿಯನ್ನು ಪಡೆದರು. ನಿಗಮವು ಆಳವಡಿಸಿರುವ ಲೋಗೋ, ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್‌ಗಳ ಬಗ್ಗೆ ಅತ್ಯಂತ ಹರ್ಷ ವ್ಯಕ್ತಿಪಡಿಸಿ ನಿಗಮವು ಜಾರಿಗೊಳಿಸಿರುವ ಬ್ಯಾಂಡಿಂಗ್ ಪಕ್ರಿಯೆಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ.ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಣತ ಐಶ್ವರ್ಯ, ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ರಾಜೀವ್ ಆನಂದ, ಮುಖ್ಯ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ), ಕೇಶ್ರಿ ನಂದನ್ ಚೌದ್ರಿ, ಪ್ರಾದೇಶಿಕ ವ್ಯವಸ್ಥಾಪಕರು, ಘಜೀಯಾಬಾದ್, ಅನುರಾಗ್ ಯಾಧವ್, ವ್ಯವಸ್ಥಾಪಕರು, ಆಗ್ರ ಮತ್ತು ನಿಗಮದ ಎನ್.ಕೆ. ಬಸವರಾಜು, ಮುಖ್ಯ ತಾಂತ್ರಿಕ ಶಿಲ್ಪಿ, ಜೆ.ಅಂತೋಣಿ ಜಾರ್ಜ್, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ), ಲಕ್ಷಣ್, ವಿಭಾಗೀಯ ನಿಯಂತ್ರಣಾಧಿಕಾರಿ, ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.







































































