ಬೆಂಗಳೂರು: ತ್ಯಾಜ್ಯ ಮುಕ್ತ ಹಾಗೂ ಸುಂದರ ಬೆಂಗಳೂರನ್ನು ನಿರ್ಮಿಸುವ ಉದ್ದೇಶದಿಂದ, ಶನಿವಾರ ಹೆಬ್ಬಾಳ ಮೇಲ್ಸೇತುವೆ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ʼತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಈ ಅಭಿಯಾನದಡಿ ಕಟ್ಟಡ ನಿರ್ಮಾಣ ತ್ಯಾಜ್ಯ, ಘನ ತ್ಯಾಜ್ಯ, ಹಳೆಯ ವಿದ್ಯುತ್ ಕಂಬಗಳು, ಪೈಪ್ಗಳು, ಮಣ್ಣಿನ ಗುಡ್ಡೆಗಳು, ಬೆಳೆದು ನಿಂತ ಕಳೆಗಿಡಗಳು ಹಾಗೂ ಮರದ ಕೊಂಬೆಗಳು ಸೇರಿದಂತೆ ಒಟ್ಟು 22,372 ಟನ್ಗಳಷ್ಟು ತ್ಯಾಜ್ಯವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ಅಭಿಯಾನದ ಮೂಲಕ ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಬೆಂಗಳೂರು ನಗರವನ್ನು ತ್ಯಾಜ್ಯ ಮುಕ್ತ ಹಾಗೂ ಮಾದರಿ ಮಹಾನಗರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದವರು ತಿಳಿಸಿದರು.
ಈ ವೇಳೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಇಂಧನ ಸಚಿವರಾದಕೆ.ಜೆ ಜಾರ್ಜ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್.ಆರ್ ವಿಶ್ವನಾಥ್ ಹಾಗೂ ಎ.ಸಿ ಶ್ರೀನಿವಾಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.







































































