ಬೆಂಗಳೂರು: ವಿಶಿಷ್ಟ ಐಡಿಯಾಗಳ ಮೂಲಕ ನವೋದ್ಯಮಗಳ (ಸ್ಟಾರ್ಟ್ ಅಪ್) ಕನಸು ಕಾಣುತ್ತಿರುವ ಪರಿಶಿಷ್ಟ ಜಾತಿ- ವರ್ಗದ 19 ಮಂದಿ ಯುವ ಪ್ರತಿಭಾವಂತರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಯ್ಕೆಯಾದ ಎಲ್ಲರಿಗೂ ಸರಕಾರದ ʼಎಲಿವೇಟ್ ಉನ್ನತಿ-2020ʼ ಯೋಜನೆ ಅಡಿಯಲ್ಲಿ ಪ್ರಶಸ್ತಿ ಮತ್ತು 1.42 ಕೋಟಿ ರೂಪಾಯಿ ಆರ್ಥಿಕ ನೆರವಿನ ಚೆಕ್ ವಿತರಿಸಿ ಶುಭ ಹಾರೈಸಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಎಲ್ಲರನ್ನು ಗೌರವಿಸಿದ ಡಿಸಿಎಂ; ಸರಕಾರ ನೀಡಿರುವ ನೆರವನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪರಿಶಿಷ್ಟ ಜಾತಿಯ 14 ಹಾಗೂ ಪರಿಶಿಷ್ಟ ವರ್ಗದ ಐವರು ಪ್ರತಿಭಾನ್ವಿತರಿಗೆ ಡಿಸಿಎಂ ಅವರು ಆರ್ಥಿಕ ನೆರವು ವಿತರಿಸಿದರಲ್ಲದೆ, ಈ ನೆರವು ಕನಿಷ್ಠ 10 ಲಕ್ಷ ರೂ.ಗಳಿಂದ ಗರಿಷ್ಠ 30 ಲಕ್ಷ ರೂ.ಗಳವರೆಗೆ ಇದೆ. ಸಮಾಜ ಕಲ್ಯಾಣ ಇಲಾಖೆ ಈ ನೆರವು ನೀಡಲಿದೆ. ಒಟ್ಟು. 2.85 ಕೋಟಿಯಲ್ಲಿ ಈಗ ಅರ್ಧದಷ್ಟು ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಉಳಿದ ಹಣ ನೀಡಲಾಗುವುದು ಎಂದರು.
ಬಯೋಟೆಕ್ನಾಲಜಿ, ಇಎಸ್ಡಿಎಂ, ಐಓಟಿ-ಐಟಿಇಎಸ್ ಕ್ಷೇತ್ರಗಳಿಗೆ ಸಂಬಂಧಿಸಿದ ನವೋದ್ಯಮ ಸ್ಥಾಪನೆಗೆ ಈ ನೆರವು ನೀಡಲಾಗಿದ್ದು, ಇದಕ್ಕೆ ಬೇಕಾದ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ನೀಡಿದೆ. ಈ ಸಂಬಂಧ ಸರಕಾರ ಮತ್ತು ಆಯ್ಕೆಗೊಂಡ ಅಭ್ಯರ್ಥಿಗಳ ನಡುವೆ ಒಪ್ಪಂದ ಏರ್ಪಟ್ಟಿದ್ದು, ಐಟಿ-ಬಿಟಿ ಇಲಾಖೆ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದರು.