ಉಡುಪಿ: ಕರಾವಳಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯ ಅನೇಕ ಕಡೆ ಕ್ರಾಸಿಂಗ್‌ಗಳನ್ನು ನಿರ್ಮಾಣ ಮಾಡುವ ಅಗತ್ಯತೆ ಇದ್ದು ಈ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಟಪಾಡಿ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿರುವ ಶೋಭಾ ಕರಂದ್ಲಾಜೆ, ಇದೀಗ ಉಡುಪಿ ಸುತ್ತಮುತ್ತ 4 ಕಾಲು ಸೇತುವೆಗಳ ನಿರ್ಮಾಣಕ್ಕೆ ಹಣ ಮಂಜೂರಾತಿ ಮಾಡಿಸಿದ್ದಾರೆ.
ಈ ಕುರಿತು ಸಂಸದೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಮನವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಸ್ತು ಅಂದಿದ್ದಾರೆ.
ಕ್ಷೇತ್ರದ ಜನರ ಅಪೇಕ್ಷೆಯ ಮೇರೆಗೆ ಶೋಭಾ ಕಂದ್ಲಾಜೆ ಮಾಡಿದ ಮನವಿಯನ್ನು ಪುರಸ್ಕರಿಸಿ ಕೇಂದ್ರ ಭೂ ಸಾರಿಗೆ ಸಚಿವರು ಉಡುಪಿ ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಒಟ್ಟು ರೂ. 4.36 ಕೋಟಿಗಳ ವೆಚ್ಚದಲ್ಲಿ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.
ಎಲ್ಲೆಲ್ಲಿ ಸ್ಟೀಲ್ ಕಾಲುಸೇತುವೆ?
- ಬಡ ಎರ್ಮಾಳ್: ಕಾಪು ವಿಧಾನಸಭಾ ಕ್ಷೇತ್ರ (ರೂ.1.08 ಕೋಟಿಗಳು)
- ಆನೆಗುಡ್ಡೆ: ಕುಂದಾಪುರ ವಿಧಾನಸಭಾ ಕ್ಷೇತ್ರ (ರೂ.1.08 ಕೋಟಿಗಳು)
- ಮಹೇಶ್ ಆಸ್ಪತ್ರೆಯ ಬಳಿ: ಉಡುಪಿ ವಿಧಾನಸಭಾ ಕ್ಷೇತ್ರ (ರೂ..1.08 ಕೋಟಿಗಳು)
- ಅಂಬಾಗಿಲು: ಉಡುಪಿ ವಿಧಾನಸಭಾ ಕ್ಷೇತ್ರ (ರೂ.1.08 ಕೋಟಿಗಳು)
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ, ಜನ ಸಂದಣಿ ಹೆಚ್ಚಿರುವ ಈ ಪ್ರದೇಶಗಳಲ್ಲಿ, ರಸ್ತೆಯನ್ನು ದಾಟಲು ಅನುಕೂಲವಾಗುವಂತೆ ಸ್ಟೀಲ್ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಕಾಮಗಾರಿಗೆ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದೆ ಎಂದಿದ್ದಾರೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಜನರ ಅಗತ್ಯತೆಗಳನ್ನು ಮನಗಂಡು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಕೇಂದ್ರ ಸರಕಾರಕ್ಕೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.