ಉಡುಪಿ: ಕರಾವಳಿಯಲ್ಲಿ ರಾತ್ರೋರಾತ್ರಿ ಖಾಕಿ-ಕೇಸರಿ ಕಾರ್ಯಾಚರಣೆ ನಡೆದಿದೆ. ಕುಂದಾಪುರದಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸರ ಜೊತೆ ಲಗ್ಗೆ ಹಾಕಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು 23 ದನಗಳನ್ನು ರಕ್ಷಣೆ ಮಾಡಿದ್ದಾರೆ.
ಅಬುಬಕ್ಕರ್ ಎಂಬವರ ಮನೆ ಮೇಲೆ ಈ ದಾಳಿ ನಡೆದಿದೆ. ಈ ಮನೆಯಲ್ಲಿ ದನಗಳನ್ನು ಕೂಡಿಹಾಕಲಾಗಿತ್ತು ಎಂಬ ಮಾಹಿತಿ ಸಿಕ್ಕಿತ್ತು. ಕುಂದಾಪುರ ತಾಲೂಕಿನ ಗುಳ್ವಾಡಿ ಗ್ರಾಮದಲ್ಲಿ ಈ ಸುದ್ದಿ ಹರಿದಾಡುತ್ತಿತ್ತು. ಈ ಕುರಿತು ಸುಳಿವು ಆಧರಿಸಿ ಪೊಲೀಸರ ಜೊತೆ ಮನೆಗೆ ಲಗ್ಗೆ ಹಾಕಿದ ಹಿಂದೂ ಸಂಘಟನೆ ಕಾರ್ಯಕರ್ತರು ಗೋವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಮನೆಯಲ್ಲೇ ಕಸಯಿಖಾನೆ ನಡೆಸಲಾಗುತ್ತಿದ್ದ ಬಗ್ಗೆ ಸಂಶಯವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕುಂದಾಪುರ ಸುತ್ತಮುತ್ತ ಆಗಾಗ್ಗೆ ದನಗಳು ಕಳುವಾಗುತ್ತಿದೆ. ದನಗಳು ಕಳವಾಗುತ್ತಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಈ ಬಾರಿ ಪೊಲೀಸರನ್ನು ಮುಂದೆ ಬಿಟ್ಟು ಈ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಈ ದಾಳಿ ಸಂದರ್ಭದಲ್ಲಿ ಸ್ಥಳೀಯ ಯುವಕರಿಂದ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ದನಗಳನ್ನ ರಕ್ಷಿಸಿ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರು ತರಾತುರಿಯಲ್ಲೇ ಸ್ಥಳದಿಂದ ಮರಳಿದ್ದಾರೆ.
ಕಂಡ್ಲೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.