ಕರಾವಳಿಯಲ್ಲಿ ಸುನಾಮಿ ರೀತಿ ಸನ್ನಿವೇಶ.. ಜನರಲ್ಲಿ ಆತಂಕ.. ತೌಕ್ತೆ ಚಂಡಮಾರುತ ಹಿನ್ನೆಲೆ ಹೈ’ಅಲರ್ಟ್..
ತಿರುವನಂತಪುರಂ: ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ಕಾಸರಗೋಡು, ದಕ್ಷಿಣ ಕನ್ನಡದಲ್ಲಿ ಮಳೆಯಾಗಿದ್ದರೆ, ಕೇರಳ ಕರಾವಳಿಯಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಈ ವರ್ಷದ ಮೊದಲ ಚಂಡಮಾರುತ ಇದಾಗಿದ್ದು ಗಂಟೆಗೆ 150ರಿಂದ 160 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಆದರೆ ಚಂಡಮಾರುತ ಅಪ್ಪಳಿಸುವ ಮುನ್ನವೇ ಖೆರಳ ಕರಾವಳಿಯಲ್ಲಿ ಭಾರೀ ಮಳೆಯಾಗಿದೆ.
ಕೇರಳದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ವಿವಿಧ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಲವೆಡೆ ಕಡಲ ತೀರದಲ್ಲಿ ಸುನಾಮಿ ರೀತಿಯ ಅಲೆಗಳು ದಡಕ್ಕೆ ಅಪ್ಪಳಿಸಿದ್ದು ಅಪಾರ ಪ್ರಮಾಧ ಹಾನಿಯುಂಟಾಗಿದೆ.
ಸಮುದ್ರದಲ್ಲಿ ಭಾರಿ ಪ್ರಮಾಣದ ಅಬ್ಬರದ ಅಲೆಗಳು ಆತಂಕಕ್ಕೆ ಕಾರಣವಾಗಿದೆ. ಕಿಝಕ್ಕೆದತುವಿನಲ್ಲಿ ಹಾಗೂ ಕೋಝಿಕ್ಕೋಡಿನಲ್ಲಿ ಪ್ರಾಣಹಾನಿಯ ವರದಿಗಳಾಗಿವೆ. ಮಲಪ್ಪುರಂನ ಪೊನ್ನಾನಿಯಲ್ಲಿ ಹಾಗೂ ಕೊಡುಂಗಲ್ಲೂರಿನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಸುಮಾರು 100 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಮಲ್ಲಪುರಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರ ಮತ್ತು ಪಾಲಕ್ಕಾಡ್ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತೀವ್ರ ಮಳೆಯಾಗಲಿದೆ.
ಉತ್ತರ ಭಾರತದಲ್ಲೂ ಹೈ ಅಲರ್ಟ್
ದಕ್ಷಿಣದ ರಾಜ್ಯಗಳ ಕರಾವಳಿ ಮಾತ್ರವಲ್ಲ, ಉತ್ತರ ಭಾರತದಲ್ಲೂ ಮಳೆಯಾಗುವ ಸಾಧ್ಯತೆಗಳಿವೆ. ದೆಹಲಿ, ಪಾಲ್ವಾಲ್, ಹೊಡಾಲ್, ಮನೇಸರ್, ಗುರುಗ್ರಾಮ್, ಫರಿದಾಬಾದ್, ಟಿಜಾರಾ, ಬುಲಂದ್‌ಶಹರ್, ಗುಲೋತಿ, ಸಿಯಾನಾ, ಜಟ್ಟಾರಿ, ಖುರ್ಜಾ, ಅತ್ರೌಲಿ, ಅಲಿಗಢ್, ಸದಾಬಾದ್, ಖೈರ್, ನೋಯ್ಡಾ, ಗ್ರೇಟರ್ ನೊಯ್ಡಾ, ಗಾಜಿಯಾಬಾದ್, ಪಿಲ್ಖುವಾ, ಹಾಪುರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.