ಬೆಂಗಳೂರು: ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಅವರು ಸುಳ್ಳುರಾಮಯ್ಯ ಆಗಿದ್ದಾರೆ. ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿ ಆಗುತ್ತಂತೆ. ಅವರಿಗೆ ಯಾವ್ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಅದೇ ಕಾರಣಕ್ಕೆ ತಾಲಿಬಾನ್ ಮತ್ತು ಆರೆಸ್ಸೆಸ್ ಒಂದೇ ತರ ಕಾಣುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಪೊರೆ ಸರಿಸಿದರೆ ತಾಲಿಬಾನ್ ಏನೆಂದು ಗೊತ್ತಾಗುತ್ತದೆ. ತಾಲಿಬಾನ್ ಇದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ ಎಂದು ಕೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ವಿರುದ್ದದ ಸಿದ್ದರಾಮಯ್ಯ ಅವರ ಟೀಕೆಗೆ ಸಿ.ಟಿ.ರವಿ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದರು. ಅಕಸ್ಮಾತ್ ತಾಲಿಬಾನ್ ಸ್ಥಿತಿ ಇಲ್ಲಿ ಇದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ. ಅವರೂ ನೇತಾಡುವ ಸ್ಥಿತಿ ಇರುತ್ತಿತ್ತು. ತಾಲಿಬಾನ್ ಏನು, ಬಿಜೆಪಿ ಏನು, ಆರೆಸ್ಸೆಸ್ ಏನು ಎಂದು ಅರ್ಥ ಮಾಡಿಕೊಳ್ಳದಷ್ಟು ಏನಾದರೂ ವ್ಯತ್ಯಾಸ ಆಗಿದೆಯೇ ಎಂದು ಪ್ರಶ್ನೆ ಮುಂದಿಟ್ಟರು.
ಕಾಂಗ್ರೆಸ್ಸಿಗರು ಕೋವಿಡ್ ವಿಷಯದಲ್ಲಿ ಚೀನಾವನ್ನು ಯಾವತ್ತಾದರೂ ಟೀಕಿಸಿದ್ದಾರಾ ಎಂದು ಕೇಳಿದರಲ್ಲದೆ, 84 ಕೋಟಿ ಜನರಿಗೆ 20 ತಿಂಗಳು ಉಚಿತ ರೇóಶನ್ ನೀಡುವ ಕೆಲಸ ಯಾವ ಕಾಲದಲ್ಲಾದರೂ ನಡೆದಿದೆಯೇ, 100 ಕೋಟಿ ಜನರಿಗೆ ವರ್ಷದೊಳಗೆ ವ್ಯಾಕ್ಸಿನ್ ಹಾಕುವ ಕೆಲಸ ಯಾವ ಸರಕಾರವಾದರೂ ಮಾಡಿತ್ತೇ ಎಂದು ಕೇಳಿದರು.
ಬಿಜೆಪಿ- ಆರೆಸ್ಸೆಸ್ ಇರುವ ಕಾರಣಕ್ಕೆ ದೇಶ ಸ್ವತಂತ್ರವಾಗಿ ಉಳಿದಿದೆ. ಆರೆಸ್ಸೆಸ್‍ನ ಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು, ಕಾಂಗ್ರೆಸ್‍ನ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಾಂಗ್ರೆಸ್ಸಿಗರು ಟೀಕಿಸುವ ಮೊದಲು ಅವರದೇ ಚರಿತ್ರೆಯನ್ನು ಅಭ್ಯಸಿಸಲಿ ಎಂದು ತಿಳಿಸಿದರು. ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೊದಲು ಹೆಡಗೇವಾರ್ ಅವರು ತಮ್ಮ ಸರಸಂಘಚಾಲಕ ಸ್ಥಾನದಿಂದ ಬಿಡುಗಡೆ ಹೊಂದಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
1962ರಲ್ಲಿ ಚೀನಾ ಜೊತೆ ಯುದ್ಧದ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ಆರೆಸ್ಸೆಸ್‍ನವರೇ ನೆರವಾಗಿದ್ದರು. ಅದಕ್ಕಾಗಿ ಪೊಲೀಸ್ ಅಲ್ಲದ, ಸ್ಕೌಟ್ –ಗೈಡ್ಸ್ ಅಲ್ಲದ, ಎನ್‍ಸಿಸಿಯೂ ಅಲ್ಲದ, ಸೈನಿಕರೂ ಅಲ್ಲದ ಆರೆಸ್ಸೆಸ್‍ನವರಿಗೆ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲು ನೆಹರೂ ಜಮಾನಾದಲ್ಲಿ 63-64ರಲ್ಲೇ ಅವಕಾಶ ನೀಡಲಾಗಿತ್ತು ಎಂದು ನೆನಪಿಸಿದರು. ಆರೆಸ್ಸೆಸ್ ಸ್ವಯಂಸೇವಕ ಪ್ರಧಾನಿ ಆದ ಕಾರಣಕ್ಕೇ ಜಮ್ಮು ಕಾಶ್ಮೀರದ ವಿಶೇóಷ ಸ್ಥಾನಮಾನವನ್ನು ರದ್ದು ಮಾಡಿದ್ದಾರೆ ಎಂದರು.
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಾಗ ಅತಿ ಹೆಚ್ಚು ಸಂಖ್ಯೆಯಲ್ಲಿ ಜೈಲಿಗೆ ಹೋಗಿ ಸಂಕಷ್ಟಕ್ಕೆ ಒಳಗಾದವರು ಬಿಜೆಪಿ, ಆರೆಸ್ಸೆಸ್‍ನವರು. ಆದರೆ, ಕಾಂಗ್ರೆಸ್‍ನವರು ಇಂದಿರಾರನ್ನು ಹೊಗಳಿಕೊಂಡೇ ಕಾಲ ಕಳೆದರು. ನಮ್ಮಿಂದ ಸ್ವಾತಂತ್ರ್ಯ ಉಳಿಯಿತು. ಆಗ ಸಿದ್ದರಾಮಯ್ಯ ಏನು ಮಾಡುತ್ತಿದ್ದರು ಎಂದು ಕೇಳಿದರು. ನಿಮ್ಮ ಮಕ್ಕಳು, ಮೊಮ್ಮಕ್ಕಳು ಸುರಕ್ಷಿತವಾಗಿರಲು ಆರೆಸ್ಸೆಸ್ ಮಜಬೂತಾಗಿ ಇರಬೇಕೆಂದು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಸಿ.ಟಿ.ರವಿ ತಿಳಿಸಿದರು.
ವಯಸ್ಸಾಗುತ್ತಿದ್ದಂತೆ ಪಕ್ವತೆ ಬರಬೇಕು. ಬುದ್ಧಿ ಭ್ರಮಣೆಗೆ ಒಳಗಾದಂತೆ ಆಡಬಾರದು. ದೇಶಭಕ್ತಿ, ಸೇವೆ, ಸಮರ್ಪಣೆಯಿಂದಲೇ ಬದುಕು ನಡೆಸುವ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ನೈತಿಕ ಮೌಲ್ಯ ಪ್ರತಿಷ್ಠಾಪಿಸುವ ಸಂಘ ಎಲ್ಲಿ, ಮಧ್ಯಪ್ರಾಚ್ಯದ 7ನೇ ಶತಮಾನದ ಬರ್ಬರತೆಯನ್ನೇ ಇವತ್ತಿಗೂ ತರಲು ಹೊರಟು, ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಂಡು ತನ್ನನ್ನು ಪ್ರಶ್ನಿಸಿದವರು, ವಿರೋಧಿಸಿದವರನ್ನು ಹತ್ಯೆ ಮಾಡುವ ತಾಲಿಬಾನ್ ಎಲ್ಲಿ ಎಂದು ಕೇಳಿದರು. ಅಕಸ್ಮಾತ್ ಇವತ್ತು ಬಿಜೆಪಿ ಸರಕಾರವು ತಾಲಿಬಾನ್ ಆಗಿದ್ದರೆ ಪ್ರಶ್ನೆ ಮಾಡುತ್ತಿರುವವರೆಲ್ಲರೂ ಬದುಕಿರುತ್ತಿದ್ದರೇ ಎಂದರು.