ಉಡುಪಿ: ಸಾಮಾಜಿಕ ಕಾರ್ಯದ ಮೂಲಕ ದೇಶದ ಯುವಜನರಿಗೆ ಸ್ಫೂರ್ತಿಯಾಗಿರುವ ಡಾ.ಗೋವಿಂದ ಬಾಬು ಪೂಜಾರಿಯವರು ಇದೀಗ ಶಾಲೆಗಳಿಗೆ ಶಕ್ತಿ ತುಂಬುವ ಪ್ರಯತ್ನಕ್ಕೂ ಮುನ್ನುಡಿ ಬರೆದಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದ ಶೈಕ್ಷಣಿಕ ಕ್ಷೇತ್ರ ಬಡವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಈ ಹಿನ್ನಲೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ಸಹಾಯ ಹಸ್ತ ಚಾಚಿದ್ದರೆ, ಇನ್ನೊಂದೆಡೆ ಪ್ರತಿಷ್ಠಿತ ChefTalk ಕಂಪನಿಯ ಮಾಲೀಕ ಡಾ.ಗೋವಿಂದ ಬಾಬು ಪೂಜಾರಿಯವರು ಬೈಂದೂರಿನ ಶಾಲೆಗೆ ಪೀಠೋಪಕರಣಗಳನ್ನು ಒದಗಿಸಿ ಸಾರ್ವಜನಿಕರ ಮೆಚ್ಚುಗೆಗೊಳಗಾಗಿದ್ದಾರೆ.
ಈ ಪೀಠೋಪಕರಣಗಳನ್ನು ಶಾಲೆಗೆ ಹಸ್ತಾಂತರಿಸಿದ ಸನ್ನಿವೇಶ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಯಿತು. ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಕಂಡು ಶಾಲಾ ಸಿಬ್ಬಂದಿ ಹಾಗೂ ಅಭಿವೃದ್ಧಿ ಸಮಿತಿಯ ಪ್ರಮುಖರು ಭಾವುಕರಾದರು.
ಶಾಲೆಯ ಪ್ರಮುಖರು ಹಾಗೂ ಮಕ್ಕಳ ಪೋಷಕರ ಕೃತಜ್ಞತೆ ಬಗ್ಗೆ ಪ್ರತಿಕ್ರಿಯಿಸಿದ ಡಾ.ಗೋವಿಂದ ಬಾಬು ಪೂಜಾರಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ತಾವು ಈ ಕಿರುಸೇವೆಗೆ ಮುಂದಾಗಿರುವುದಾಗಿ ತಿಳಿಸಿದರು. ಹಳ್ಳಿ ಜನರು ನಗರಗಳಂತಹಾ ಶಿಕ್ಷಣ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಟ್ರಸ್ಟ್ ವತಿಯಿಂದ ವಿನೂತನ ಕಾರ್ಯಕ್ರಮ ರೂಪಿಸಲಾಗುವುದು ಎಂದು ಡಾ.ಗೋವಿಂದ ಬಾಬು ಪೂಜಾರಿ ತಿಳಿಸಿದರು.