ಪುರಿ: ಭಾರತದ ಮಹಿಳಾ ಕ್ರಿಕೆಟ್ ತಂಡವು 2025ರ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಹಿನ್ನೆಲೆಯಲ್ಲಿ, ಖ್ಯಾತ ಮರಳು ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಸೋಮವಾರ ಪುರಿ ಬೀಚ್‌ನಲ್ಲಿ ವಿಶಿಷ್ಟ ಮರಳು ಶಿಲ್ಪ ನಿರ್ಮಿಸಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕಲಾಕೃತಿಯಲ್ಲಿ “ಅಭಿನಂದನೆಗಳು! ಭಾರತ್ ಕಿ ನಾರಿ ಶಕ್ತಿ” ಎಂಬ ಸಂದೇಶವನ್ನು ಒಳಗೊಂಡಿದ್ದು, ಭಾರತೀಯ ಮಹಿಳೆಯರ ಶಕ್ತಿ, ದೃಢಸಂಕಲ್ಪ ಮತ್ತು ಚೈತನ್ಯವನ್ನು ಬಿಂಬಿಸುತ್ತದೆ. ಐದು ಟನ್ ಮರಳಿನಿಂದ ನಿರ್ಮಿಸಲಾದ ಆರು ಅಡಿ ಉದ್ದದ ಕ್ರಿಕೆಟ್ ಬ್ಯಾಟ್ ಹಾಗೂ ಹಲವು ಚೆಂಡುಗಳಿಂದ ಅಲಂಕರಿಸಲಾದ ಈ ಶಿಲ್ಪವು, ವಿಜೇತ ಆಟಗಾರ್ತಿಯರ ಪರಿಶ್ರಮ ಮತ್ತು ತಂಡದ ಒಗ್ಗಟ್ಟಿಗೆ ಪ್ರತೀಕವಾಗಿದೆ.
‘ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದಿರುವುದು ಭಾರತ ನಾರಿ ಶಕ್ತಿಯ ಪ್ರತಾಪವನ್ನು ವಿಶ್ವದ ಮುಂದೆ ಪ್ರದರ್ಶಿಸಿದೆ. ಅವರ ಗೆಲುವು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಗತಿ. ನನ್ನ ಕಲೆಯ ಮೂಲಕ ಅವರಿಗೆ ಗೌರವ ಸಲ್ಲಿಸಲು ಈ ಶಿಲ್ಪ ರಚಿಸಿದ್ದೇನೆ’ ಎಂದು ಸುದರ್ಶನ್ ಪಟ್ನಾಯಕ್ ತಿಳಿಸಿದ್ದಾರೆ.


















































