ನವದೆಹಲಿ: ಕಣ್ಣಿನ ರೆಟಿನಾದಲ್ಲಿನ ಸಣ್ಣ ರಕ್ತನಾಳಗಳನ್ನು ಸ್ಕ್ಯಾನ್ ಮಾಡುವುದರಿಂದ ವ್ಯಕ್ತಿಯ ಹೃದ್ರೋಗದ ಅಪಾಯ ಮತ್ತು ದೇಹ ಜೈವಿಕವಾಗಿ ಎಷ್ಟು ವೇಗವಾಗಿ ವಯಸ್ಸಾಗುತ್ತಿದೆ ಎಂಬುದರ ಸುಳಿವು ದೊರೆಯಬಹುದು ಎಂಬ ಸಂಗತಿಯನ್ನು ಕೆನಡಾದ ಸಂಶೋಧಕರು ಪತ್ತೆ ಮಾಡಿದ್ದಾರೆ.
ರೆಟಿನಲ್ ಸ್ಕ್ಯಾನ್ಗಳು ಮುಂದಿನ ದಿನಗಳಲ್ಲಿ ದೇಹದ ನಾಳೀಯ ಆರೋಗ್ಯ ಮತ್ತು ವಯಸ್ಸಾದಿಕೆಯ ಮಟ್ಟವನ್ನು ಅಳೆಯುವ ಆಕ್ರಮಣಶೀಲವಲ್ಲದ (non-invasive) ವಿಧಾನವಾಗಿ ಪರಿಣಮಿಸಬಹುದು. ಇದು ಹೃದಯ ಮತ್ತು ನಾಳೀಯ ರೋಗಗಳ ಆರಂಭಿಕ ಪತ್ತೆ ಹಾಗೂ ತಡೆಗೆ ಹೊಸ ದಾರಿ ತೆರೆಸಬಹುದು ಎಂಬುದನ್ನು ತಜ್ಞರು ಬೆಳಕುಚೆಲ್ಲಿದ್ದಾರೆ. ಈ ಕುರಿತ ಲೇಖನ ‘ಸೈನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ.
“ರೆಟಿನಲ್ ಸ್ಕ್ಯಾನ್ಗಳ ಮೂಲಕ ಜೆನೆಟಿಕ್ ಮಾಹಿತಿಯನ್ನೂ, ರಕ್ತದ ಬಯೋಮಾರ್ಕರ್ಗಳನ್ನೂ ಸಂಪರ್ಕಿಸಿ ವಯಸ್ಸಾದಿಕೆಯು ನಾಳೀಯ ವ್ಯವಸ್ಥೆಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಸ್ಪಷ್ಟವಾಗಿ ವಿಶ್ಲೇಷಿಸಿದ್ದೇವೆ. ಕಣ್ಣು ದೇಹದ ರಕ್ತಪರಿಚಲನಾ ವ್ಯವಸ್ಥೆಯಲ್ಲಿನ ಬದಲಾವಣೆಗಳ ವಿಶಿಷ್ಟ ಕಿಟಕಿಯಾಗಿದೆ,” ಎಂದು ಕೆನಡಾದ ಮೆಕ್ಮಾಸ್ಟರ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಮೇರಿ ಪಿಗೆರೆ ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಸಂಶೋಧನಾ ತಂಡವು 74,000 ಕ್ಕೂ ಹೆಚ್ಚು ಮಂದಿ ಭಾಗವಹಿಸುವವರ ರೆಟಿನಲ್ ಸ್ಕ್ಯಾನ್ಗಳು, ಜೆನೆಟಿಕ್ ಡೇಟಾ ಹಾಗೂ ರಕ್ತದ ಮಾದರಿಗಳನ್ನು ಸಂಯೋಜಿಸಿ ವಿಶ್ಲೇಷಣೆ ನಡೆಸಿದೆ.
ಫಲಿತಾಂಶದಲ್ಲಿ, ಸರಳ ಮತ್ತು ಕಡಿಮೆ ಶಾಖೆಗಳಿರುವ ರಕ್ತನಾಳಗಳನ್ನು ಹೊಂದಿದವರಲ್ಲಿ ಹೃದಯರೋಗದ ಅಪಾಯ ಹೆಚ್ಚಿದ್ದು, ದೇಹದ ಉರಿಯೂತ ಪ್ರಮಾಣ ಹೆಚ್ಚು ಹಾಗೂ ಜೀವಿತಾವಧಿ ಕಡಿಮೆ ಎಂದು ಕಂಡುಬಂದಿದೆ.
ಪ್ರಸ್ತುತ ಹೃದ್ರೋಗ, ಪಾರ್ಶ್ವವಾಯು ಮತ್ತು ಸ್ಮೃತಿಭ್ರಂಶದಂತಹ ವಯಸ್ಸುಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ಅನೇಕ ಪರೀಕ್ಷೆಗಳ ಅವಶ್ಯಕತೆ ಇದೆ. ಆದರೆ ಭವಿಷ್ಯದಲ್ಲಿ ರೆಟಿನಲ್ ಸ್ಕ್ಯಾನ್ ಮಾತ್ರದ ಮೂಲಕವೇ ಈ ಅಪಾಯಗಳನ್ನು ಅಂದಾಜಿಸಲು ಸಾಧ್ಯವಾಗಬಹುದು ಎಂಬುದು ವಿಜ್ಞಾನಿಗಳ ಆಶಯ.
ಅದೇ ವೇಳೆ ಸಂಶೋಧಕರು MMP12 ಮತ್ತು IgG-Fc ಗ್ರಾಹಕ IIb ಎಂಬ ಎರಡು ಪ್ರೋಟೀನ್ಗಳು ನಾಳೀಯ ವಯಸ್ಸಾದಿಕೆ ಹಾಗೂ ಉರಿಯೂತಕ್ಕೆ ಸಂಬಂಧಿಸಿರುವುದನ್ನು ಗುರುತಿಸಿದ್ದಾರೆ. ಈ ಪ್ರೋಟೀನ್ಗಳು ಮುಂದಿನ ದಿನಗಳಲ್ಲಿ ಹೃದ್ರೋಗ ತಡೆಗಟ್ಟುವ ಔಷಧ ಸಂಶೋಧನೆಗೆ ಗುರಿಯಾಗಬಹುದು ಎಂದು ಪಿಗೆರೆ ತಿಳಿಸಿದ್ದಾರೆ.
“ನಮ್ಮ ಪತ್ತೆಗಳು ನಾಳೀಯ ವಯಸ್ಸಾದಿಕೆಯನ್ನು ನಿಧಾನಗೊಳಿಸಿ, ಹೃದಯರೋಗದ ಅಪಾಯವನ್ನು ತಗ್ಗಿಸಿ, ಜೀವಿತಾವಧಿಯನ್ನು ವೃದ್ಧಿಸಲು ಸಹಕಾರಿಯಾಗುವ ಸಾಧ್ಯತೆ ಇದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.



























































