ಮಲೆನಾಡ ಸೆರಗಲ್ಲಿ ಅವಿತಿರುವ ಕಾಮಾಂಧರ ಪಾಲಿಗೆ ಈಕೆ ಇದೀಗ ಸಿಂಹ ಸ್ವಪ್ನ. ಶಾರದೆಯ ನಾಡು ಶೃಂಗೇರಿಯಲ್ಲಿ ಅತ್ಯಾಚಾರಿಗಳ ಪೆರೇಡ್‌ನ ಸದ್ದು ಮಾರ್ಧನಿಸಿದರೆ, ಇಡೀ ರಾಜ್ಯದಲ್ಲೀಗ ಈ ಖಡಕ್ ಲೇಡಿ ಪೊಲೀಸ್ ಅಧಿಕಾರಿಯದ್ದೇ ಸುದ್ದಿ.
ಚಿಕ್ಕಮಗಳೂರು: ಸುಸಂಸ್ಕೃತರ ತಾಣ, ಶಾರದಾಂಬೆಯ ನಾಡು ಎಂದೇ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಶೃಂಗೇರಿ ಇದೀಗ ವಿಕೃತಿಯ ಕೃತ್ಯದಿಂದಾಗಿ ಸುದ್ದಿಯ ಕೇಂದ್ರಬಿಂದುವಾಗಿರುವುದು ವಿಪರ್ಯಾಸ. 15ರ ಹರೆಯದ ಬಾಲೆಯ ಮೇಲೆ ಸುಮಾರು ಮೂವತ್ತು ಮಂದಿ ಕಾಮಾಂಧರು ನಡೆಸಿದ್ದಾರೆನ್ನಲಾದ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಮಲೆನಾಡಿನ ಸೆರಗಲ್ಲಿ ಅವಿತು ಕಾಮಾಂಧರು ನಡೆಸಿರುವ ಈ ಕೀಚಕ ಕೃತ್ಯ ಇದೀಗ ಬೆಳಕಿಗೆ ಬಂದಿದ್ದು ಅಖಾಡಕ್ಕಿಳಿದ ಮಹಿಳಾ ಪೊಲೀಸ್ ಅಧಿಕಾರಿ ಶೃತಿ ಅವರು ಅತ್ಯಾಚಾರಿಗಳನ್ನು ಜೈಲಿನತ್ತ ಪೆರೇಡ್ ಮಾಡಿಸುತ್ತಿರುವ ಪ್ರಕ್ರಿಯೆ ರಾಜ್ಯದ ಖಾಕಿ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. 15ರ ಹರೆಯದ ಬಾಲಕಿ ಮೇಲೆ 30ಕ್ಕೂ ಹೆಚ್ಚು ಮಂದಿ ಅತ್ಯಾಚಾರ ನಡೆಸಿದ್ದಾರೆನ್ನಲಾಗುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದ್ದೇ ತಡ, ದುರ್ಗಿಯಂತೆ ಅಖಾಡಕ್ಕೆ ಧುಮುಕಿದ ಜಲಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶೃತಿ ಅವರು ಕೀಚಕರ ಬೇಟೆಯಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಏನಿದು ಪ್ರಕರಣ?
ಶೃಂಗೇರಿ ಸಮೀಪದ ಬಾಲಕಿ ಮೇಲೆ ಸುಮಾರು 5 ತಿಂಗಳಿನಿಂದ ನಿರಂತರ ಅತ್ಯಾಚಾರ ನಡೆಯುತ್ತಿತ್ತೆಂಬುದು ಪೊಲೀಸರಿಗೆ ಆರಂಭದಲ್ಲಿ ಸಿಕ್ಕಿರುವ ಮಾಹಿತಿ. ಈ ಬಗ್ಗೆ ಸುಳಿವು ಸಿಕ್ಕಿದ್ದೇ ತಡ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಎಫ್‌ಐಆರ್‌ನಲ್ಲಿ ಕೆಲವು ಶಂಕಿತರ ಹೆಸರಿದ್ದು ಸ್ಥಳೀಯ ಮಟ್ಟದಲ್ಲಿ ಈ ಪ್ರಕರಣ ಅಷ್ಟೇನೂ ಸುದ್ದಿಯಾಗಿರಲಿಲ್ಲ. ಆದರೆ ಪ್ರಕರಣದ ಗಂಭೀರತೆ ಅರಿತ ಚಿಕ್ಕಮಗಳೂರು ಎಸ್ಪಿ, ಈ ಪ್ರಕರಣದ ಉಸ್ತುವಾರಿಯನ್ನು ಅಡಿಷನಲ್ ಎಸ್ಪಿ ಶೃತಿ ಅವರಿಗೆ ವಹಿಸಿದರು. ಈ ಲೇಡಿ ಆಫೀಸರ್ ತನಿಖೆಯ ನೊಗವನ್ನು ಹೆಗಲಿಗೇರಿಸಿಕೊಂಡಿದ್ದೇ ತಡ, ಇಡೀ ಪ್ರಕರಣಕ್ಕೆ ರೋಚಕತೆಯ ಟ್ವಿಸ್ಟ್ ಸಿಕ್ಕಿದೆ.
ಬಾಲಕಿಯ ಚಿಕ್ಕಮ್ಮನೇ ಈ ಕಾಮಕಾಂಡದ ಕಿಂಗ್‌ಪಿನ್ ಎನ್ನಲಾಗಿದ್ದು ಆಕೆ ಮಾತ್ರವಲ್ಲ, 13 ಮಂದಿ ಈವರೆಗೆ ಖಾಕಿ ಖೆಡ್ಡಕ್ಕೆ ಬಿದ್ದಿದ್ದಾರೆ.
ಮಲೆನಾಡಿನ ಸೆರಗಲ್ಲಿ ಅವಿತಿದ್ದ ಕೀಚಕರನ್ನು ತಂಡೋಪತಂಡವಾಗಿ ಅಡಿಷನಲ್ ಎಸ್ಪಿ ನೇತೃತ್ವದ ಪೊಲೀಸ್ ತಂಡ ನಿತ್ಯವೂ ಬಂಧಿಸುತ್ತಿದ್ದು ಈ ಬೆಳವಣಿಗೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಸುದ್ದಿಯ ಕೇಂದ್ರಬಿಂದುವಾಗಿದೆ.
ಎಫ್‌ಐಆರ್‌ನಲ್ಲಿ ಕೆಲವರ ಹೆಸರುಗಳಷ್ಟೇ ಇತ್ತು. ಆದರೆ ಇದೀಗ 13 ಮಂದಿ ಬಂಧನವಾಗಿದ್ದು, ಇನ್ನುಳಿದ ಕೀಚಕರಿಗಾಗಿ ಮಲೆನಾಡಿನಲ್ಲಿ ಖಾಕಿ ಬೇಟೆ ಮುಂದುವರಿದಿದೆ. ಅನೇಕ ಶ್ರೀಮಂತ ಕುಟುಂಬದ ಸದಸ್ಯರೇ ಅರೋಪಿಗಳೆಂಬ ಸತ್ಯವೂ ಬೆಳಕಿಗೆ ಬಂದಿದೆ. ಈ ಕಾರಣದಿಂದಾಗಿ ಪೊಲೀಸರ ಮೇಲೆ ಒತ್ತಡವೂ ಇದೆ ಎನ್ನಲಾಗಿದೆ. ಹೀಗಿದ್ದರೂ ಎಲ್ಲಾ ಸವಾಲುಗಳನ್ನು ಮೆಟ್ಟಿ ಆರೋಪಿಗಳನ್ನು ಜೈಲಿನತ್ತ ಪೆರೇಡ್ ಮಾಡಿಯೇ ಸಿದ್ದ ಎಂದು ಅಖಾಡದಲ್ಲೇ ಟೊಂಕ ಕಟ್ಟಿ ನಿಂತಿದೆ ಖಾಕಿ ತಂಡ. ಈ ಬೆಳವಣಿಗೆ ಸಾಮಾಜಿಕ ಹೋರಾಟಗಾರ ಮೆಚ್ಚುಗೆಗೆ ಪಾತ್ರವಾಗಿದೆ.