ಗಣಿ ಇಲಾಖೆಯಲ್ಲಿ ಮತ್ತೊಂದು ಹೊಸ ಅಧ್ಯಾಯಕ್ಕೆ ಸಚಿವ ನಿರಾಣಿ ಮುನ್ನುಡಿ.. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಸ್ತಾವನೆ ಮರುಚಾಲನೆ.. ಕುಟಿಗರ ಸಹಕಾರ ಸಂಘದ ಕಲ್ಲುಗಣಿಗೆ ಅನುಮತಿ.. 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ..
ಬೆಂಗಳೂರು: ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲೇ ಇಲಾಖೆಯಲ್ಲಿ ಹೊಸ ಹೊಸ ಸುಧಾರಣೆಗಳನ್ನು ಜಾರಿ ಮಾಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಇದೀಗ ಸಾವಿರಾರು ಜನರಿಗೆ ಆಶ್ರಯ ಒದಗಿಸುವ ಗ್ರಾನೈಟ್ ಕಲ್ಲು ಗಣಿಗುತ್ತಿಗೆಯನ್ನು ಹರಾಜುರಹಿತ ನೀಡಿ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದಾರೆ.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಲ್ಲು ಗಣಿಗುತ್ತಿಗೆಗೆ ಕೊನೆಗೂ ಚಾಲನೆ ಸಿಕ್ಕಿದೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕು, ಮದ್ದಕ್ಕನಹಳ್ಳಿ ಗ್ರಾಮದ ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಗ್ರೇ ಗ್ರಾನೈಟ್ ಕಲ್ಲುಗಣಿ ನಡೆಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಲಾಗಿದೆ. ಇದರಿಂದಾಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಲಿದ್ದು,ಅವರ ಕುಟುಂಬಕ್ಕೂ ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಆಶ್ರಯ ಸಿಗಲಿದೆ.
ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ (ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 56ರಡಿ ವಿಶೇಷ ಪ್ರಕರಣವೆಂದು) ಪರಿಗಣಿಸಿ ಹರಾಜು ರಹಿತವಾಗಿ ಮಂಜೂರಾತಿ ಮಾಡಲು ಶುಕ್ರವಾರ ನಡೆದ ಸಂಪುಟ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೊಂದಣಿ ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಈ ಸಂಘಕ್ಕೆ ಮಾನವೀಯತೆಯ ದೃಷ್ಟಿಯಿಂದ ಹರಾಜು ರಹಿತವಾಗಿ ಸಚಿವ ನಿರಾಣಿ ಮಂಜೂರು ಮಾಡಿದ್ದಾರೆ.
ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಕಲ್ಲು ಗಣಿ ಗುತ್ತಿಗೆಯನ್ನು ಮಂಜೂರು ಮಾಡಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದ ಇಲಾಖೆಯ ಹಂತದಲ್ಲೇ ನೆನೆಗುದಿಗೆ ಬಿದ್ದಿತ್ತು.
ಇದರ ಬಗ್ಗೆ ಸವಿಸ್ತಾರವಾಗಿ ಅಧ್ಯಯನ ನಡೆಸಿದ ಸಚಿವರು, ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆಗೆ ಚರ್ಚೆಸಿ ಇದಕ್ಕೊಂದು ಪರಿಹಾರ ಒದಗಿಸಲೇಬೇಕು ಎಂಬ ದೃಢ ಸಂಕಲ್ಪ ಮಾಡಿದ ಪರಿಣಾಮ ಇಂದು ಕಾರ್ಯರೂಪಕ್ಕೆ ಬಂದಿದೆ.
ಸಂಘಕ್ಕೆ 1995 ರಿಂದ ಜಾರಿಗೆಬರುವಂತೆ 5 ವರ್ಷಗಳ ಅವಧಿಗೆ ಗಣಿ ಗುತ್ತಿಗೆಯನ್ನು ಮಂಜೂರು ಮಾಡಿ, ಪುನಃ 20 ವರ್ಷಗಳ ಅವಧಿಗೆ ನವೀಕರಿಸಲಾಗಿತ್ತು. ಇದಾದಬಳಿಕ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ ನಿಯಮದಂತೆ ನಾಲ್ಕು ತಿಂಗಳ ಅವಧಿಯೊಳಗೆ ನೋಂದಣಿ ಮಾಡಿಸಿ ಕೊಂಡಿರಲಿಲ್ಲ. ಈ ಕಾರಣದಿಂದಾಗಿ ಉಪನೋಂದಣಾಧಿಕಾರಿಗಳು 2015ರಲ್ಲಿ ನೊಂದಣಿ ಮಾಡಲು ಅವಕಾಶವಿಲ್ಲವೆಂದು ಹೇಳಿದ್ದರು.
ಬಳಿಕ ನೋಂದಣಿ ಮಾಡಿಸಿಕೊಳ್ಳಲು ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತ್ತಾದರೂ. ಕಾನೂನು ಅಭಿಪ್ರಾಯ ಕೇಳುವ ಪ್ರಕ್ರಿಯೆ ನೆಪದಲ್ಲಿ ನೆನೆಗುದಿಗೆ ಬಿದ್ದಿತ್ತು. ಇದೀಗ ಸರ್ಕಾರ ಗಣಿ ಗುತ್ತಿಗೆ ಮರು ಮಂಜೂರಾತಿ ಮಾಡಲು ತೀರ್ಮಾನಿಸಲಾಗಿದೆ.