ಬೆಂಗಳೂರು: ಕೆಎಎಸ್ ಅಧಿಕಾರಿ ಅಪೂರ್ವ ಬಿದರಿ ಪ್ರಕರಣವು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭ್ರಷ್ಟ ಅಧಿಕಾರಿಗಳನ್ನುಸರ್ಕಾರ ರಷಿಸುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವಾಗಲೇ ಅಪೂರ್ವ ಬಿದರಿ ಪ್ರಕರಣ ಕೂಡಾ ಭಾರೀ ಸದ್ದೆಬ್ಬಿಸಿದೆ. ಆದಾಗ್ಯೂ ಅಪೂರ್ವ ಬಿದರಿ ವಿರುದ್ದದ ಪ್ರಕರಣದಲ್ಲಿ FIR ದಾಖಲಿಸಲು ಸರ್ಕಾರ ಹಿಂದೇಟು ಹಾಕಿದೆ ಎಂಬ ಸಾಮಾಜಿಕ ಹೋರಾಟಗಾರರ ಆರೋಪವು ರಾಜ್ಯ ಸರ್ಕಾರವನ್ನು ಮುಜುಗರದ ಸನ್ನಿವೇಶದಲ್ಲಿ ಸಿಲುಕಿಸಿದೆ.
ಅಪೂರ್ವ ಬಿದರಿ ಪ್ರಕರಣ ಕುರಿತಂತೆ ರಾಜ್ಯ ಸಾಮಾಜಿಕ ಹೋರಾಟಗಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾಮಲಿಂಗೇ ಗೌಡ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ದೂರು ನೀಡಿರುವ ಬೆಳವಣಿಗೆಯು ಒಟ್ಟಾರೆ ಪ್ರಕರಣಕ್ಕೆ ರೋಚಕ ತಿರುವು ನೀಡಿದೆ.
ಅರೆ ನ್ಯಾಯಿಕ ಪ್ರಕರಣದಲ್ಲಿ, 53 ದೋಷಪೂರಿತವಾಗಿ ಆದೇಶವನ್ನು ಹೊರಡಿಸುವ ಮೂಲಕ, ಸರ್ಕಾರಿ ಜಾಗಗಳನ್ನು ಖಾಸಗಿ ವ್ಯಕ್ತಿಗಳ ಪರವಾಗಿ ಆದೇಶ ಮಾಡಿದ ಆರೋಪ ಬಗ್ಗೆ ಬೆಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಆಯುಕ್ತರಾದ ಅಪೂರ್ವ ಬಿದರಿ ಮೇಲೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಮತ್ತು ಭಾರತೀಯ ನ್ಯಾಯಸಂಹಿತೆ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಲು ಬೆಂಗಳೂರು ಪ್ರಾದೇಶಿಕ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಆದರೆ, ಎಫ್.ಐ.ಆರ್. ದಾಖಲಿಸಲು ಸಂಬಂಧಪಟ್ಟ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಡಿ.ಎಸ್.ರಾಮಲಿಂಗೇ ಗೌಡ ಅವರು ಈ ಮನವಿಯಲ್ಲಿ ಗಮನಸೆಳೆದಿದ್ದಾರೆ.
ದೋಷಪೂರಿತವಾಗಿ ಆದೇಶ ಮೂಲಕ, ಸರ್ಕಾರಿ ಜಾಗಗಳನ್ನು ಖಾಸಗಿ ವ್ಯಕ್ತಿಗಳ ಪರವಾಗಿ ಆದೇಶ ಮಾಡಿದ ಆರೋಪ ಇದೆ. ಯಾವುದೇ ಮಾನದಂಡಗಳನ್ನು ಪಾಲಿಸದೆ, ಸರ್ಕಾರಿ ಜಾಗಗಳನ್ನು ಖಾಸಗಿ ವ್ಯಕ್ತಿಗಳ ಪರವಾಗಿ ಆದೇಶ ಮಾಡುವ ಮೂಲಕ ನೂರಾರು ಕೋಟಿ ಭ್ರಷ್ಟಾಚಾರದ ನಡೆದಿರಬಹುದು ಎಂಬ ಶಂಕೆ ಇದೆ. ಹಾಗಾಗಿ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿ.ಎಸ್.ರಾಮಲಿಂಗೇ ಗೌಡ ಮನವಿ ಮಾಡಿದ್ದಾರೆ.
ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಸೆಕ್ಷನ್ 35 ರಡಿಯಲ್ಲಿ ಹಾಗೂ ಭಾರತೀಯ ನ್ಯಾಯಸಂಹಿತೆ 257 ರಡಿಯಲ್ಲಿ ಶಿಸ್ತು ಕ್ರಮ ಜರುಗಿಸಬಹುದೆಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ಇದೇ ವೇಳೆ, FIR ದಾಖಲಿಸಿ, ಸದರಿ FIR ಪ್ರತಿಯೊಂದಿಗೆ ಅನುಪಾಲನಾ ವರದಿಯನ್ನು ತುರ್ತಾಗಿ ಸಲ್ಲಿಸಲು ಸೂಚಿಸಿದೆ. ಆದರೆ ಜಿಲ್ಲಾಧಿಕಾರಿಗಳು ಅಥವಾ ಇತರೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ರಾಮಲಿಂಗೇ ಗೌಡ ಅಸಮಾಧಾನ ಹೊರಹಾಕಿದ್ದಾರೆ.





















































