ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನೊಳಗಿನ ಒಳಜಗಳ ಮಂಗಳವಾರ ಬಹಿರಂಗವಾಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಭೇಟಿಯೊಂದಿಗೆ, ಉಪಮುಖ್ಯಮಂತ್ರಿಯೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಣವು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಅವಶ್ಯಕತೆ ಬಗ್ಗೆ ಪ್ರತಿಪಾದಿಸಿದೆ ಎನ್ನಲಾಗಿದೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗೆ ಪ್ರತಿಯಾಗಿ ಉಪಮುಖ್ಯಮಂತ್ರಿ ಶಿವಕುಮಾರ್ ಅವರ ಬಣವು ಈ ನಿಲುವು ಹೊಂದಿದೆ ಎಂದು ಮೂಲಗಳು ಬಹಿರಂಗಪಡಿಸುತ್ತವೆ. ಇದು ರಾಜ್ಯ ರಾಜಕೀಯದಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆಗಳನ್ನು ಸೂಚಿಸುತ್ತದೆ. ಅವರು ರಾಜ್ಯ ಅಧ್ಯಕ್ಷ ಹುದ್ದೆಗೆ ಸಿದ್ಧ ಎಂದು ಮತ್ತಷ್ಟು ಹೇಳಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಪಕ್ಷದ ಶಾಸಕರೊಂದಿಗೆ ಮುಖಾಮುಖಿ ಸಭೆ ನಡೆಸುತ್ತಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಒನ್ ಟು ಒನ್ ಮೀಟ್ ಆಗಿದ್ದರಿಂದಾಗಿ ಡಿಕೆಶಿ ಬೆಂಬಲಿಗರು ನಾಯಕತ್ವ ಬದಲಾವಣೆಯಾಗದ ಹೊರತು ಪಕ್ಷಕ್ಕೆ ಮುಂದೆ ಭವಿಷ್ಯ ಇಲ್ಲ ಎಂಬುದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಉಪಮುಖ್ಯಮಂತ್ರಿ ಶಿವಕುಮಾರ್ ಅವರ ಆಪ್ತರೂ ಆಗಿರುವ ರಾಮನಗರದ ಶಾಸಕ ಇಕ್ಬಾಲ್ ಹುಸೇನ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಬಹಳಷ್ಟು ಮಂದಿ ಸುರ್ಜಿವಾಳ ಬಳಿಯಲ್ಲಷ್ಟೇ ಹೇಳಿಕೊಂಡಿದ್ದಾರೆಯೇ ಹೊರತು ಅದನ್ನು ಬಹಿರಂಗಪಡಿಸಿಲ್ಲ ಎನ್ನಲಾಗಿದೆ. ಇದೇ ವೇಳೆ, ‘ಪಕ್ಷವು ನೋಟಿಸ್ ನೀಡಿದರೆ ನನಗೆ ಚಿಂತೆಯಿಲ್ಲ. ಅವರು ಏನು ಬೇಕಾದರೂ ಮಾಡಲಿ. ನನಗೆ ಬದಲಾವಣೆ ಬೇಕು – ನಾಯಕತ್ವ ಬದಲಾವಣೆ. ಮುಖ್ಯಮಂತ್ರಿಯನ್ನು ಬದಲಾಯಿಸುವ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ” ಎಂದು ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಮಾಗಡಿಯ ಶಾಸಕ ಮತ್ತು ಶಿವಕುಮಾರ್ ಅವರ ಬೆಂಬಲಿಗ ಎಚ್.ಸಿ. ಬಾಲಕೃಷ್ಣ ಅವರು ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ., ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎಂದು ವರು ಹೇಳಿದರು. ‘ಶಿವಕುಮಾರ್ ಹಲವು ವರ್ಷಗಳಿಂದ ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಅವರು ಹೇಳಿದರಲ್ಲದೆ, ಡಿಕೆಶಿ ಅವರಿಗೂ ಅವಕಾಶ ನೀಡಬೇಕು ಎಂದು ಬಾಲಕೃಷ್ಣ ಪಟ್ಟು ಹಿಡಿದಿರುವ ಬೆಳವಣಿಗೆಯೂ ಗಮನಾರ್ಹ.
ಆದರೆ ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ಕೊಪ್ಪಳದ ಕಾಂಗ್ರೆಸ್ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಮತ್ತು ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದರು.
ಇದೆಲ್ಲದರ ನಡುವೆ, ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ. ಆದರೆ, ಪಕ್ಷದ ಅಧ್ಯಕ್ಷರಾಗಿ ಈ ರೀತಿ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ ಅವರ ಬೆಂಬಲಿಗರ ಪಾಲಯದಲ್ಲಿನ ಒಳಗುಟ್ಟು ಮಾತ್ರ ನಿಗೂಢವಾಗಿದೆ.



























































