ಬೆಂಗಳೂರು: ಶಿವಾಜಿನಗರದ ಚಾಂದಿನಿಚೌಕ್ ಬಳಿಯ ದರ್ಗಾದ ಉತ್ಸವದ ವಿಚಾರದಲ್ಲಿ ವಿವಾದ ಉಲ್ಬಣಗೊಂಡಿದೆ. ಈ ಹಿಂದೆ ದರ್ಗಾದ ಸಮಿತಿ ರಚನೆ ವಿಚಾರದಲ್ಲಿ ವಿವಾದ ಉಂಟಾಗಿ ನ್ಯಾಯಾಲಯ ನೀಡಿದ್ದ ಆದೇಶವನ್ನು ವಕ್ಫ್ ಬೋರ್ಡ್‌ನಿಂದ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಉತ್ಸವದ ವಿಚಾರದಲ್ಲೂ ಗಣ್ಯರ ನಡೆ ವಿವಾದಕ್ಕೆ ಎಡೆಮಾಡಿಕೊಟ್ಟಂತಿದೆ.
ದರ್ಗಾದ ಸಮಿತಿ ಸದಸ್ಯರು ಒಂದು ರೀತಿ ಸಾಂಪ್ರದಾಯಿಕವಾಗಿ ಕೈಂಕರ್ಯಗಳನ್ನು ನೆರವೇರಿಸಲು ಸಿದ್ದತೆ ನಡೆಸಿದ್ದರೆ, ಕೆಲವರು ರಾಜಕೀಯ ಪ್ರಭಾವ ಬಳಸಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದರೆಂದು ದರ್ಗಾದ ಸಮಿತಿಯ ಮತ್ತೊಂದು ಗುಂಪು ಆರೋಪ ಮಾಡಿದೆ. ದರ್ಗಾದ ಬಹುಪಾಲು ಭಕ್ತರು ಕೂಡಾ ಈ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ವಕ್ಫ್ ಬೋರ್ಡ್‌ಗೆ ದೂರು ಸಲ್ಲಿಸಿದ್ದಾರೆ.
ಕೊವಿಡ್ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಹೀಗಿರುವಾಗ ತರಾತುರಿಯ, ನಿಯಮ ಬಾಹಿರ ನಡೆಯು ದರ್ಗಾದ ಸಂಪ್ರದಾಯ ಹಾಗೂ ಪಾವಿತ್ರ್ಯಕ್ಕೆ ಧಕ್ಕೆ ಉಂಟುಮಾಡಬಹುದು ಎಂಬುದು ಭಕ್ತರ ಅಭಿಪ್ರಾಯ. ಹಾಗಾಗಿ ರಾಜಕಾರಣಿಗಳಿಗೆ ಆಶ್ರಯ ನೀಡಲು ಪೂರಕವಾಗಿ ಅನಗತ್ಯ ಕಾರ್ಯಕ್ರಮಗಳಿಗೆ ಅನುಮತಿ ನೀಡಿದ್ದರೆ ದರ್ಗಾದ ಹಿತಾಸಕ್ತಿ ಆಧರಿಸಿ ಪುನರ್ ಪರಿಶೀಲಿಸಬೇಕೆಂದು ಈ ದೂರಿನಲ್ಲಿ ಮನವಿ ಮಾಡಲಾಗಿದೆ ಎಂದು ಧಾರ್ಮಿಕ ಮುಖಂಡರೂ ಆದ ಸಾಮಾಜಿಕ ಕಾರ್ಯಕರ್ತ ಆರ್.ಅಬ್ದುಲ್ ಸುಬ್ಬಾನ್ ಷರೀಫ್ ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ ಬಳಿಯ ಹಜರತ್ ಸಯ್ಯದ್ ಪೀರ್ ಜಮಾಲ್ ಷಾ ಖಾದ್ರಿ (RA), ಹಜರತ್ ಸಯ್ಯದ್ ಹಯಾತ್ ಷಾ ಖಾದ್ರಿ (RA) ಈ ದರ್ಗಾಗಳಲ್ಲಿ, ಸಂದಲ್ ಷರೀಫ್ ದಿನಾಂಕ: 6-3-2021, ಉರೂಸ್ ಎ ಷರೀಫ್ 7-3-2021 ಹಾಗೂ ಕವಾಲಿ ಕಾರ್ಯಕ್ರಮ ಸಲುವಾಗಿ ಅನುಮತಿ ನೀಡಲಾಗಿದೆ ಎಂದು ಪ್ರಚಾರ ನಡೆದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ತನ್ವೀರ್ ಸೇಠ್, ನಾಸಿರ್ ಹುಸೇನ್, ಬೋರ್ಡ್ ಸದಸ್ಯರಾದ ಆಸಿಫ್ ಆಲಿ ಶೇಖ್, ಅನ್ವರ್ ಬಾಷಾ, ಎನ್.ಕೆ.ಮಹಮ್ಮದ್, ಸಾಫಿ ಸಯೀದ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ. ಈ ಪೋಸ್ಟನ್ನು ಆಧಾರವಾಗಿಟ್ಟು ಧಾರ್ಮಿಕ ಮುಖಂಡರೂ ಆದ ಸಾಮಾಜಿಕ ಕಾರ್ಯಕರ್ತ ಆರ್.ಅಬ್ದುಲ್ ಸುಬ್ಬಾನ್ ಷರೀಫ್ ನೇತೃತ್ವದಲ್ಲಿ ಭಕ್ತರು ವಕ್ಫ್ ಬೋರ್ಡ್‌ಗೆ ದೂರು ನೀಡಿದ್ದಾರೆ.
ಈ ನಡುವೆ, ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾದರೆ, ಇಡೀ ಬಕ್ತ ಸಮೂಹದ ಆಕ್ರೋಶಕ್ಕೆ ಗುರಿಯಾಗುವ ಆತಂಕ ರಾಜಕೀಯ ಮುಖಂಡರನ್ನೂ ಕಾಡತೊಡಗಿದೆ ಎನ್ನಲಾಗುತ್ತಿದೆ.